ಸಾರಾಂಶ
ಫೇಸ್‌ಬುಕ್ ಪ್ರೆಂಡ್ಸ್ ಬಳಗದಲ್ಲಿದ್ದ ಮಹಿಳೆಯೋರ್ವಳು ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಪ್ರೇಮಪಾಶಕ್ಕೆ ಸಿಲುಕಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಸಂದರ್ಭ ಕಂಗೆಟ್ಟ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಫೇಸ್‌ಬುಕ್ ಪ್ರೆಂಡ್ಸ್ ಬಳಗದಲ್ಲಿದ್ದ ಮಹಿಳೆಯೋರ್ವಳು ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಪ್ರೇಮಪಾಶಕ್ಕೆ ಸಿಲುಕಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಸಂದರ್ಭ ಕಂಗೆಟ್ಟ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ನಡೆದಿದೆ.ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವನ ಫೇಸ್ಬುಕ್ ಸಂಪರ್ಕದಲ್ಲಿದ್ದ ಮಹಿಳೆಯೋರ್ವಳು ಆತ್ಮೀಯತೆಯನ್ನು ಮೂಡಿಸಿ ವಿದ್ಯಾರ್ಥಿಗೆ ವಿಡಿಯೋ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ವಿದ್ಯಾರ್ಥಿಗೆ ತನ್ನ ನಗ್ನ ದೇಹವನ್ನು ಕಾಣಿಸಿ ಭಾವನೆಯನ್ನು ಕೆರಳಿಸಲು ಯತ್ನಿಸಿದ್ದಾಳೆ. ಬಳಿಕ ವಿಡಿಯೋ ಕರೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಯ ಮುಖವನ್ನು ಬಳಸಿ ಅಶ್ಲೀಲ ವಿಡಿಯೋಗೆ ಎಡಿಟ್ ಮಾಡಿ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೇರೊಬ್ಬ ವ್ಯಕ್ತಿಯು ಪೋನ್ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯನ್ನು ಮುಂದಿರಿಸಿದ್ದಾನೆ.
ಕಂಗೆಟ್ಟ ವಿದ್ಯಾರ್ಥಿಯು ವಿಚಾರವನ್ನು ಮಾಧ್ಯಮ ಪ್ರತಿನಿಧಿಯ ಗಮನಕ್ಕೆ ತಂದ ಕಾರಣ, ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ರವಾನಿಸಲಾಯಿತು. ಈ ಖಾತೆ ಬ್ಲಾಕ್ ಮಾಡುವಂತೆ ಪೊಲೀಸರು ಸಲಹೆ ನೀಡಿದರು. ಪೊಲೀಸರಿಗೆ ಪ್ರಕರಣ ತಲುಪಿದ ಸುಳಿವರಿತ ವಂಚಕರ ತಂಡ ಬ್ಲ್ಯಾಕ್‌ಮೇಲ್ ಯತ್ನದಿಂದ ಹಿಮ್ಮೆಟ್ಟಿ ಬಳಸಿದ ಮೂರು ಮೊಬೈಲ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಿತು.ಇತ್ತ ವಂಚನಾ ಜಾಲದ ಸುಳಿಗೆ ಸಿಲುಕಿ ಭಯಭೀತನಾಗಿದ್ದ ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಮಾದ್ಯಮ ಪ್ರತಿನಿಧಿಗಳು ಧೈರ್ಯ ತುಂಬಿದ್ದಾರೆ.ಇತರ ವಂಚನೆಗೆ ಸಿಲುಕಿದವರು ಭಯಪಡದೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ಸಂಖ್ಯೆ ೧೯೩೦ ಕ್ಕೆ ತಕ್ಷಣವೇ ಸಂಪರ್ಕಿಸಿ ಸಹಾಯ ಯಾಚಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.