ಸಕಾಲ ಸೇವೆ ಬಾಗಲಕೋಟೆ ಜಿಲ್ಲೆ ಪ್ರಥಮ

| Published : Mar 03 2025, 01:48 AM IST

ಸಾರಾಂಶ

ಕನಾಟಕ ಸಕಾಲ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬಾಗಲಕೋಟೆ ಜಿಲ್ಲೆ ಸಕಾಲ ಶ್ರೇಯಾಂಕ ಪಟ್ಟಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನಾಟಕ ಸಕಾಲ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬಾಗಲಕೋಟೆ ಜಿಲ್ಲೆ ಸಕಾಲ ಶ್ರೇಯಾಂಕ ಪಟ್ಟಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.

ಸಕಾಲ ಸೇವೆಗಳ ಅನುಷ್ಠಾನದಲ್ಲಿ ಶೇ.79.25ರಷ್ಟು ಸಾಧನೆ ಮಾಡುವ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಹಾಸನ ಜಿಲ್ಲೆ (ಶೇ.78.81) ದ್ವಿತೀಯ ಸ್ಥಾನ, ಕೊಪ್ಪಳ ಜಿಲ್ಲೆ (ಶೇ.78.77) ತೃತೀಯ ಸ್ಥಾನ ಪಡೆದುಕೊಂಡಿವೆ.

ಸಕಾಲ ಸೇವೆಗಳ ಅಧಿನಿಯಮ 2011 ಪರಿಣಾಮಕಾರಿಯಾಗಿ ಅನುಷ್ಠಾನ, ಸಕಾಲ ಅಧಿಸೂಚಿತ ಸೇವೆಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿವುದು ಹಾಗೂ ಎಲ್ಲ ಜಿಲ್ಲೆಗಳಲ್ಲಿ ಏಕರೂಪತೆಯ ಸಕಾಲ ಸಮನ್ವಯ ಸಮಿತಿ ರಚಿಸಲು ಸರ್ಕಾರ ಆದೇಶಿಸಿತ್ತು. ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ಜನ ಸದಸ್ಯರು ಹಾಗೂ ಓರ್ವ ಸದಸ್ಯ ಕಾರ್ಯದರ್ಶಿ ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿತ್ತು.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ರಚನೆಗೊಂಡ ಸಕಾಲ ಸಮನ್ವಯ ಸಮಿತಿ ಸಭೆ ಪ್ರತಿವಾರ ಸಭೆ ನಡೆಸಿ ಸಕಾಲದಡಿ ಬಂದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇ ಮಾಡುವ ಮೂಲಕ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿತ್ತು. ಈ ಸಕಾಲದಡಿ ಬಂದ ಒಟ್ಟು 86272 ಅರ್ಜಿಗಳ ಪೈಕಿ 84685 ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೆ ಮಾಡುವ ಮೂಲಕ ಸಕಾಲ ಶ್ರೇಯಾಂಕದಲ್ಲಿ ಪಟ್ಟಿ ಪ್ರಥಮ ರ್ಯಾಂಕ್ ಪಡೆದುಕೊಳ್ಳುವಲ್ಲಿ ಜಿಲ್ಲೆಯ ಯಶಸ್ವಿಯಾಗಿದೆ. ಸಕಾಲ ಸೇವೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಥಮ ರ್‍ಯಾಂಕ್ ಪಡೆಯಲು ಕಾರಣರಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಭಿನಂದಿಸಿದ್ದಾರೆ.