ತಿಪಟೂರು: ತೆರೆದ ಚರಂಡಿ ಮುಚ್ಚಲು ನಾಗರಿಕರ ಮನವಿ

| Published : Feb 13 2024, 12:47 AM IST / Updated: Feb 13 2024, 03:32 PM IST

ಸಾರಾಂಶ

ತೆರೆದ ಚರಂಡಿಯನ್ನು ಮುಚ್ಚುವಂತೆ ತಿಪಟೂರಿನ ನಾಗರಿಕರು ನಗರಸಭೆ ಅಧಿಕಾರಿಗಳುನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಕೋಡಿ ಸರ್ಕಲ್‌ವರೆಗೂ ಅಮಾನಿಕೆರೆ ಏರಿಯ ಪಕ್ಕದಲ್ಲಿ ಮಳೆ ನೀರು ಹೊರ ಹೋಗಲೆಂದು ದೊಡ್ಡ ಚರಂಡಿ ತೆಗೆಯಲಾಗಿದ್ದು ಚರಂಡಿಯ ಮೇಲ್ಬಾಗವನ್ನು ಮುಚ್ಚದ ಕಾರಣ ಅಮಾಯಕರು ಎದ್ದು ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿರುವ ಘಟನೆಗಳು ನಡೆಯುತ್ತಿವೆ. 

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಚರಂಡಿಯ ಮೇಲ್ಬಾಗವನ್ನು ಸಂಪೂರ್ಣವಾಗಿ ಮುಚ್ಚುವಂತೆ ನಗರದ ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.

ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚರಂಡಿಯು ಸುಮಾರು ಒಂದು ಕಿ.ಮೀ ದೂರದಷ್ಟಿದ್ದು ಸುಮಾರು ೧೦ರಿಂದ ೧೨ ಅಡಿ ಆಳ, ೬ರಿಂದ ೮ ಅಡಿ ಅಗಲದಲ್ಲಿ ಚರಂಡಿ ನಿರ್ಮಾಣವಾಗಿ ವರ್ಷಗಳೇ ಕಳೆದುಹೋಗಿದೆ. 

ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಓಡಾಡುತ್ತಾರೆ. 

ಹಳೇಪಾಳ್ಯ ಸೇರಿದಂತೆ ನಗರದ ವಿವಿಧ ಬಡಾವಣೆಗಳಗೆ ಈ ರಸ್ತೆ ಸಂಪರ್ಕ ರಸ್ತೆಯಾಗಿದೆ. ಬೆಳಗಿನ ಜಾವ ತರಕಾರಿ ಮಾರುಕಟ್ಟೆಗೆ ರೈತರು ತಾವು ಬೆಳೆದ ಬೆಳೆಗಳನ್ನು ಆಟೋ, ದ್ವಿಚಕ್ರ ವಾಹನಗಳಲ್ಲಿ ಇದೇ ರಸ್ತೆಯಲ್ಲಿ ತರಲು ಓಡಾಡುತ್ತಾರೆ. 

ಎರಡೂ ಕಡೆಗಳಿಂದ ಬೃಹತ್ ವಾಹನಗಳು ಬಂದರೆ ಪಕ್ಕದಲ್ಲಿರುವ ಚರಂಡಿ ಗಮನಕ್ಕೆ ಬಾರದೇ ಅಪಘಾತಗಳಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.

ಚರಂಡಿಯ ಸುತ್ತಲೂ ಅನಪೇಕ್ಷಿತ ಗಿಡಗಳು, ಕಳೆಗಳು ಬೆಳೆದಿರುವ ಕಾರಣ ರಸ್ತೆಗೆ ಅಂಟಿಕೊಂಡಿರುವ ಚರಂಡಿಯೇ ಸವಾರರಿಗೆ ಕಾಣುವುದಿಲ್ಲ. ಒಂದು ವೇಳೆ ರಾತ್ರಿ ಯಾರಾದರೂ ಬಿದ್ದರೂ ಯಾರ ಗಮನಕ್ಕೂ ಬರುವುದಿಲ್ಲ. 

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಕೈ, ಕಾಲುಗಳನ್ನು ಮುರಿದುಕೊಂಡು ಆಸ್ಪತ್ರೆಗೆ ಹಣ ತೆರುವಂತಾಗಿದೆ. 

ಇನ್ನಷ್ಟು ಅಮಾಯಕರ ಪ್ರಾಣ ಬಲಿಯಾಗುವ ಮುನ್ನಾ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿಯ ಮೇಲ್ಬಾಗವನ್ನು ಮುಚ್ಚಬೇಕೆಂದು ವಾಹನ ಸವಾರರ ಪರವಾಗಿ ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.