ಸಾರಾಂಶ
ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಚಾಲಕ ಚಂದ್ರಕಾಂತ ಎಂಬವರಿಗೆ ₹500 ದಂಡ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ.
ಹೊನ್ನಾವರ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದು ಸಾಮಾನ್ಯ. ಆದರೆ ಪಟ್ಟಣದಲ್ಲಿ ಟಿಪ್ಪರ್ ಚಾಲಕರೊಬ್ಬರು ಹೆಲ್ಮೆಟ್ ಧರಿಸಿಲ್ಲವೆಂದು ಇಲ್ಲಿನ ಪೊಲೀಸರು ದಂಡ ವಿಧಿಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೊಲೀಸರು ದಂಡ ವಿಧಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಚಾಲಕ ಚಂದ್ರಕಾಂತ ಎಂಬವರಿಗೆ ₹500 ದಂಡ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಹೊನ್ನಾವರದಲ್ಲಿ ಟಿಪ್ಪರ್ ಮಾಲೀಕ ತನ್ನ ವಾಹನವನ್ನು ಮರಳು ಸಾಗಾಟಕ್ಕೆ ಕಳುಹಿಸಿದ್ದ. ಈ ವೇಳೆ ಟಿಪ್ಪರ್ ತಡೆದ ಹೊನ್ನಾವರ ಪೊಲೀಸರು ಚಾಲಕ ಚಂದ್ರಕಾಂತ ಎಂಬವರಿಂದ ₹500 ದಂಡ ವಸೂಲಿ ಮಾಡಿದ್ದಾರೆ. ರಶೀದಿ ನೋಡಿದ ಚಾಲಕನಿಗೆ ಶಾಕ್ ಆಗಿದೆ. ಪೊಲೀಸರೆ ನೀಡಿರುವ ರಶೀದಿ ಪ್ರಕಾರ ಇನ್ನು ಮುಂದೆ ಹೊನ್ನಾವರಲ್ಲಿ ಟಿಪ್ಪರ್ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಇದ್ದರೆ ದಂಡ ಬೀಳುವುದಂತೂ ಗ್ಯಾರಂಟಿ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‌ಐ ಸಂತೋಷಕುಮಾರ ಅವರು, ಟಿಪ್ಪರ್ ಚಾಲಕ ಸಮವಸ್ತ್ರ ಧರಿಸಿರಲಿಲ್ಲ. ಹೀಗಾಗಿ ₹500 ದಂಡ ವಿಧಿಸಲಾಗಿದೆ. ಆದರೆ ಕಣ್ತಪ್ಪಿನಿಂದ ಹೆಲ್ಮೆಟ್ ಧರಿಸದ್ದರಿಂದ ದಂಡ ಎಂದು ರಶೀದಿ ನೀಡಲಾಗಿದೆ ಎಂದಿದ್ದಾರೆ.
ಕೊಟ್ಟಿಗೆಯಲ್ಲಿದ್ದ ಹಸು ಎಳೆದೊಯ್ದು ತಿಂದ ಚಿರತೆಭಟ್ಕಳ:ತಾಲೂಕಿನ ಮಾರುಕೇರಿಯ ಹೂತ್ಕಳದಲ್ಲಿ ಚಿರತೆಯೊಂದು ಕೊಟ್ಟಿಗೆಯಲ್ಲಿದ್ದ ಹಸುವೊಂದನ್ನು ಎಳೆದೊಯ್ದು ತಿಂದು ಹಾಕಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಚಿರತೆ ಹೂತ್ಕಳದ ಕೃಷ್ಣ ದುರ್ಗಪ್ಪ ನಾಯ್ಕ ಅವರ ಕೊಟ್ಟಿಗೆಯಲ್ಲಿದ್ದ ಹಸುವನ್ನು ತಿಂದು ಹಾಕಿದೆ. ಬೆಳಗ್ಗೆ ಕೊಟ್ಟಿಗೆಯಲ್ಲಿ ಹಸು ಇಲ್ಲದ್ದನ್ನು ಗಮನಿಸಿದ ಮನೆಯವರು ಹೊರಗೆ ಬಂದು ನೋಡಿದಾಗ ಯಾವುದೋ ಪ್ರಾಣಿ ಹಸುವನ್ನು ತಿಂದು ಹಾಕಿರುವುದು ಪತ್ತೆಯಾಗಿದೆ. ಸುದ್ದಿ ತಿಳಿದ ಸ್ಥಳಕ್ಕೆ ಮಾರುಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಗೊಂಡ, ಉಪಾಧ್ಯಕ್ಷ ಎಂ.ಡಿ. ನಾಯ್ಕ, ಪಶು ವೈದ್ಯಾಧಿಕಾರಿ ಶಿವಕುಮಾರ, ಗ್ರಾಪಂ ಕಾರ್ಯದರ್ಶಿ, ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಭಾಗದಲ್ಲಿ ಚಿರತೆ ಕಾಟ ಜೋರಾಗಿದ್ದು, ರಾತ್ರಿ ವೇಳೆ ಕೊಟ್ಟಿಗೆಯಲ್ಲಿದ್ದ ದನಕರುಗಳನ್ನು ಎಳೆದೊಯ್ದು ತಿನ್ನುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಚಿರತೆ ದನಕರುಗಳನ್ನು ತಿಂದ ಹಲವು ಪ್ರಕರಣಗಳು ನಡೆದಿವೆ. ಚಿರತೆ ದಾಳಿಗೆ ಸಂಬಂಧಿಸಿದಂತೆ ದನದ ಮಾಲೀಕರಿಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಬೇಕೆಂದು ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.