ಕಾಶ್ಮೀರ ದಾಳಿ ಖಂಡಿಸಿ ಸೋಮವಾರ ತಿಪಟೂರು ಬಂದ್

| Published : Apr 25 2025, 11:51 PM IST

ಸಾರಾಂಶ

ಕಾಶ್ಮಿರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರವಾದಿಗಳ ರಣಹೇಡಿ ಕೃತ್ಯವನ್ನು ಖಂಡಿಸಿ ತಿಪಟೂರಿನಲ್ಲಿ ಪಕ್ಷಾತೀತವಾಗಿ ಸಮಸ್ತ ಹಿಂದುಗಳಿಂದ 28ರ ಸೋಮವಾರದಂದು ತಿಪಟೂರು ಬಂದ್‌ಗೆ ಕರೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ಕಾಶ್ಮಿರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರವಾದಿಗಳ ರಣಹೇಡಿ ಕೃತ್ಯವನ್ನು ಖಂಡಿಸಿ ತಿಪಟೂರಿನಲ್ಲಿ ಪಕ್ಷಾತೀತವಾಗಿ ಸಮಸ್ತ ಹಿಂದುಗಳಿಂದ 28ರ ಸೋಮವಾರದಂದು ತಿಪಟೂರು ಬಂದ್‌ಗೆ ಕರೆ ನೀಡಲಾಗಿದೆ. ನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂಪರ ಸಂಘಟನೆಗಳ ಒಕ್ಕೂಟದ ಶ್ರೀಶಾ ಅವರು, ಹಿಂದೂ ಸಮಾಜದ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ, ಅತ್ಯಾಚಾರದಂತಹ ದೌರ್ಜನ್ಯ ಕೃತ್ಯಗಳು ನಡೆಯುತ್ತಿದ್ದು ಹಿಂದೂ ಸಮಾಜದ ಅಸ್ತಿತ್ವಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಶ್ಮೀರದಲ್ಲಿ ನಡೆದ ಉಗ್ರವಾದಿಗಳ ಕ್ರೌರ್ಯ ಸಮಾಜವನ್ನು ಬೆಚ್ಚಿಬೀಳಿಸಿದೆ. ಹಿಂದೂಗಳು ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗಲಿವೆ. ಕಾಶ್ಮೀರ ದಾಳಿಯನ್ನು ಖಂಡಿಸಿ ದೇಶಾದ್ಯಂತ ಹಿಂದೂ ಸಂಘಟನೆಗಳು ಬಂದ್, ಪ್ರತಿಭಟನೆಯ ಕರೆ ನೀಡಿದ್ದು ಅದರಂತೆ ತಿಪಟೂರಿನಲ್ಲಿಯೂ ಹಿಂದೂಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಿಪಟೂರು ಬಂದ್‌ಗೆ ಕರೆ ನೀಡಲಾಗಿದು ಇದು ರಾಜಕೀಯವಲ್ಲ ಅಥವಾ ಯಾವುದೇ ಸರ್ಕಾರದ ವಿರುದ್ದವೂ ಅಲ್ಲ. ಪಕ್ಷಾತೀತವಾಗಿ ಹಿಂದೂ ಸಮಾಜದ ರಕ್ಷಣೆಗಾಗಿ ಬಂದ್ ಆಚರಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಂದ್‌ಗೆ ಸಹಕರಿಸಬೇಕೆಂದರು.

ಹಿಂದೂ ಸಂಘಟನೆಯ ಮುಖಂಡ ಬಾಗೇಪಲ್ಲಿ ನಟರಾಜು ಮಾತನಾಡಿ, ಕಾಶ್ಮೀರದಲ್ಲಿ ನಡೆದ ಮತಾಂಧ ಇಸ್ಲಾಮಿ ಉಗ್ರಗಾಮಿಗಳು ೨೮ಕ್ಕೂ ಹೆಚ್ಚು ಹಿಂದೂಗಳ ಮೇಲೆ ಗುಂಡಿನ ದಾಳಿ ನಡೆಸಿರುವುದು ಉದ್ದೇಶ ಪೂರ್ವಕವಾಗಿದೆ. ಉಗ್ರವಾದಿಗಳನ್ನು ಸದೆಬಡಿಯಲು ಹಿಂದೂ ಸಮಾಜ ಕಟಿಬದ್ಧವಾಗಬೇಕಿದೆ. ತಿಪಟೂರು ಬಂದ್‌ಗೆ ಕರೆ ನೀಡಿದ್ದು ಅಂದು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಂಘ ಸಂಸ್ಥೆಗಳು, ಆಟೋ ಚಾಲಕರು. ರೈತರು, ಕೊಬ್ಬರಿ ವರ್ತಕರು, ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬಂದ್ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ಹೇಮಂತ್, ತರಕಾರಿ ಗಂಗಾಧರ್, ರಾಮಮೋಹನ್, ರವೀಂದ್ರ, ಸುದರ್ಶನ್, ಶಿವಪ್ರಕಾಶ್, ಶ್ರೀನಿವಾಸ್, ಶ್ರೀಧರ್ ಲಕ್ಕವಳ್ಳಿ, ಬಾಬು, ಪರಮೇಶ್ ಇತರರಿದ್ದರು.