ಮೈಸೂರು: ಹಜ್ರತ್ ಟಿಪ್ಪು ಸುಲ್ತಾನ್ ಷಹೀದ್ ವತಿಯಿಂದ ನಗರದ ಮಿಲಾದ್ ಪಾರ್ಕಿನಲ್ಲಿ ಟಿಪ್ಪು ಸುಲ್ತಾನರ 233ನೇ ಗಂಧರ ಉರುಸ್ ಅನ್ನು ಮಂಗಳವಾರ ಆಚರಿಸಲಾಯಿತು.

ಮೈಸೂರು: ಹಜ್ರತ್ ಟಿಪ್ಪು ಸುಲ್ತಾನ್ ಷಹೀದ್ ವತಿಯಿಂದ ನಗರದ ಮಿಲಾದ್ ಪಾರ್ಕಿನಲ್ಲಿ ಟಿಪ್ಪು ಸುಲ್ತಾನರ 233ನೇ ಗಂಧರ ಉರುಸ್ ಅನ್ನು ಮಂಗಳವಾರ ಆಚರಿಸಲಾಯಿತು.

ಟಿಪ್ಪು ಸುಲ್ತಾನ್ ವೆಲ್‌ ಫೇರ್ ಮತ್ತು ಉರುಸ್ ಸಮಿತಿಯ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಸೂಫಿ ಸಂತರು, ಟಿಪ್ಪು ಸುಲ್ತಾನರ ಅಭಿಮಾನಿಗಳು, ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಮಸೀದಿಗಳ ಧರ್ಮಗುರುಗಳು ಮತ್ತು ಸರ್ಖಾಜಿ ಸೈಯದ್ ಉಸ್ಮಾನ್ ಅವರ ಸಮ್ಮುಖದಲ್ಲಿ ಜರುಗಿತು.

ವಾಡಿಕೆಯಂತೆ ಶ್ರೀಗಂಧದ ಕರಂಡಿಕೆಯನ್ನು ಶಾಸಕ ತನ್ವೀರ್ ಸೇಠ್ ತಲೆಯ ಮೇಲೆ ಹೊತ್ತು ಸೂಫಿಗಳ ವಾದ್ಯದ ಮೆರವಣಿಗೆಯೊಂದಿಗೆ ಮಿಲಾದ್ ಪಾರ್ಕಿನಿಂದ ಪಾದಯಾತ್ರೆ ಹೊರಟು ಬಳಿಕ ಫೌಂಟನ್ ವೃತ್ತದವರೆಗೂ ಸಾಗಿದರು. ಬಳಿಕ ಅದನ್ನು ವಾಹನದ ಮೂಲಕ ಶ್ರೀರಂಗಪಟ್ಟಣದ ಗುಂಬಜ್‌ ನಲ್ಲಿರುವ ಟಿಪ್ಪು ಸುಲ್ತಾನದ ಸಮಾಧಿಗೆ ಕೊಂಡೊಯ್ಯಲಾಯಿತು.

ಟಿಪ್ಪು ದೇಶಪ್ರೇಮಿ

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಟಿಪ್ಪು ಸುಲ್ತಾನ್ ವೆಲ್‌ ಫೇರ್ ಮತ್ತು ಉರುಸ್ ಸಮಿತಿಯ ಅಧ್ಯಕ್ಷರಾದ ವಕೀಲ ಎಂ.ಎಸ್. ಮುಕ್ರಂ ಮಾತನಾಡಿ, ಟಿಪ್ಪು ಸುಲ್ತಾನ್ ಎಂಬ ಹೆಸರೇ ಒಂದು ದೊಡ್ಡ ಶಕ್ತಿಯಾಗಿದೆ. ಆ ಹೆಸರನ್ನು ಹೇಳಿದರೆ ಎಂತಹ ಬಲಹೀನರು ಶೂರರಾಗುತ್ತಾರೆ. ಟಿಪ್ಪು ಅವರು ಕೇವಲ ಶೂರರು ಮಾತ್ರವಲ್ಲ, ಅಪ್ಪಟ ದೇಶ ಪ್ರೇಮಿಗಳಾಗಿದ್ದವರು. ಇಂದು ಕೇವಲ ಅವರು ಮುಸ್ಲಿಂ ಧರ್ಮಿಯರು ಎಂಬ ಕಾರಣಕ್ಕೆ ಅವರನ್ನು ಕಡೆಗಳಿಸಲಾಗಿದೆ ಎಂದು ಹೇಳಿದರು.

ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸು ಮಾತನಾಡಿ, ಕೇವಲ ವೋಟಿನ ರಾಜಕಾರಣಕ್ಕಾಗಿ ಟಿಪ್ಪು ಸುಲ್ತಾನ ಎಂಬ ಮಹಾನ್ ದೇಶ ಪ್ರೇಮಿಯನ್ನು ಕಡೆಗಣಿಸಲಾಗಿದೆ. ಶೃಂಗೇರಿ ಮಠವನ್ನು ಲೂಟಿ ಮಾಡಿ, ಶಾರದಾಂಬೆಯ ಮೂಲ ವಿಗ್ರಹವನ್ನು ನದಿಗೆ ಎಸೆದವರು ಬ್ರಾಹ್ಮಣ ಪೇಶ್ವೆಗಳು, ಆದರೇ ಮಠದ ಪುನರ್‌ ನಿರ್ಮಾಣಕ್ಕೆ ಟಿಪ್ಪು ಸುಲ್ತಾನರು ಹಣ ಕೊಟ್ಟು ಮಠವನ್ನು ಶತೃಗಳಿಂದ ರಕ್ಷಿಸುತ್ತಾರೆ. ಇಂತಹ ಸತ್ಯ ನಮಗೆ ತಿಳಿದಿದ್ದರೂ ನಾವು ಸುಳ್ಳನ್ನೆ ನಂಬುವಂತೆ ಟಿಪ್ಪು ವಿರುದ್ಧ ಮಾತನಾಡುತ್ತೇವೆ ಎಂದರು.

ಮುಖಂಡರಾದ ಎಂ.ಎಫ್. ಕಲೀಂ, ಮಜೀದ್ ಅಹಮದ್, ಮೊಹಮ್ಮದ್ ರಫಿ, ರಘುರಾಜೇ ಅರಸ್, ಶೌಕತ್ ಅಲಿಖಾನ್, ಮೊಹಮ್ಮದ್ ಅಸ್ಲಂ, ಅಜೀಜ್ ಅಲಿ ಕಿಷ್ತಿ ಮೊದಲಾದವರು ಇದ್ದರು.