ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಪರೇಷನ್ ಸಿಂಧೂರ ನಡೆಸಿದ ವೀರ ಸೇನಾನಿಗಳನ್ನು ಬೆಂಬಲಿಸಿ ಹಿಂದೂ ಸಂಘಟನೆಗಳು, ಮಾಜಿ ಸೈನಿಕರು, ವಿದ್ಯಾರ್ಥಿಗಳು ನಗರದಲ್ಲಿ ತಿರಂಗ ಯಾತ್ರೆ ನಡೆಸಿದರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾಯಿಸಿದ ಎಲ್ಲ ಸಂಘಟನೆಗಳ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೆ ತಿರಂಗ ಯಾತ್ರೆ ನಡೆಯಿತು.
ಬಾಳೇಹೊನ್ನೂರು ರಂಬಾಪುರಿ ಶಾಖಾ ಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಹಲ್ಗಾಂನಲ್ಲಿ ಹಿಂದೂಗಳನ್ನು ಉಗ್ರರು ಹತ್ಯೆ ಮಾಡಿರುವುದನ್ನು ಖಂಡಿಸುತ್ತೇವೆ. ಕೇಂದ್ರ ಸರ್ಕಾರ ಮೂರು ಸೇನಾ ಪಡೆಗಳು ಹೋರಾಟ ನಡೆಸಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಇದು ದೇಶಕ್ಕೆ ನೀಡಿದ ಕೊಡುಗೆಯಾಗಿದೆ ಎಂದರು.ಹಿಂದೂ ಮಹಿಳೆಯರ ಸಿಂಧೂರವನ್ನು ಅಳಿಸಿಹಾಕಿದ್ದ ಕಾರಣಕ್ಕೆ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚಾರಣೆ ನಡೆಸಿ ನೂರಕ್ಕು ಹೆಚ್ಚು ಮಂದಿ ಉಗ್ರರನ್ನು ಹತ್ಯೆ ಮಾಡಿದೆ. ಪಾಕಿಸ್ತಾನದಲ್ಲಿ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ. ಅಲ್ಲಿನ ಸೇನಾ ನೆಲೆಗಳನ್ನೂ ಸಹ ಹೊಡೆದು ಹಾಕಿದೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವಾಗಿದೆ ಎಂದರು.
ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರವನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯಗಳನ್ನು ನಡೆಸಿದ್ದೇ ಆದಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಭವಿಷ್ಯ ನುಡಿದರು.ಭಾರತದ ಸೇನಾ ಬತ್ತಳಿಕೆಯಲ್ಲಿರುವ ಆಯುಧಗಳ ಪರಿಚಯವನ್ನು ಜಗತ್ತಿಗೇ ಮಾಡಿಕೊಡುವ ಮೂಲಕ ಎಲ್ಲರಿಗೂ ಎಚ್ಚರಿಕೆಯ ಸಂದೇಶವನ್ನು ನಮ್ಮ ಸೇನೆ ಮಾಡಿದೆ ಎಂದು ಸೇನೆಯ ಕಾರ್ಯವನ್ನು ಶ್ಲಾಘಿಸಿದರು.
ಭಾರತದೊಳಗೇ ಇರುವ ಕೆಲ ಹಿತಶತೃಗಳು ಸೇನೆಯ ಕಾರ್ಯಾಚರಣೆಯನ್ನು ಶ್ಲಾಘಿಸುವುದನ್ನು ಬಿಟ್ಟು ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೂ ಮುಂದಿನ ದಿನಗಳಲ್ಲಿ ಕಾಲವೇ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಂ, ಎಚ್.ಆರ್.ಅರವಿಂದ್, ಎಚ್.ಆರ್. ಅಶೋಕ್, ಕೆಂಪುಬೋರಯ್ಯ, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ನಿತ್ಯಾನಂದ, ನಾಗಾನಂದ, ವಿವಿಧ ಸಂಘಟನೆಗಳ ಮುಖಂಡರು, ನಿವೃತ್ತ ಯೋಧರು, ವಿದ್ಯಾರ್ಥಿಗಳು, ವೈದ್ಯರು ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದರು.