ಸಾರಾಂಶ
ಕಾರವಾರ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಮೇ 29ರಂದು ಪಕ್ಷಾತೀತವಾಗಿ ತಿರಂಗಾ ಯಾತ್ರೆ ನಡೆಯಲಿದೆ.
ಕಾರವಾರ: ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಮೇ 29ರಂದು ಪಕ್ಷಾತೀತವಾಗಿ ತಿರಂಗಾ ಯಾತ್ರೆ ನಡೆಯಲಿದೆ. ಎಲ್ಲರೂ ಪಾಲ್ಗೊಳ್ಳುವ ಮೂಲಕ ತಿರಂಗಾಯಾತ್ರೆಗೆ ಅಭೂತಪೂರ್ವ ಯಶಸ್ಸು ತಂದುಕೊಡುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹಾಗೂ ಇತರ ಪ್ರಮುಖರು ವಿನಂತಿಸಿದ್ದಾರೆ.
ಪಹಲ್ಗಾಂನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಅಮಾಯಕರನ್ನು ಹತ್ಯೆ ಮಾಡಿದ ಪ್ರತೀಕಾರವಾಗಿ ಭಾರತದ ರಕ್ಷಣಾ ಪಡೆಗಳು ಪಾಕಿಸ್ತಾನದ ಭಯೋತ್ಪಾದಕರ ಅಡಗು ತಾಣಗಳ ಮೇಲೆ ಯಶಸ್ವಿಯಾಗಿ ಅಪ್ರತಿಮ ದಾಳಿ ನಡೆಸಿ ಉಗ್ರರನ್ನು ಮಟ್ಟಹಾಕುವಲ್ಲಿ ಭಾರೀ ಯಶಸ್ಸು ಗಳಿಸಿವೆ. ನಮ್ಮ ವೀರ ಯೋಧರ ಸಾಹಸಕ್ಕೆ ಮೆಚ್ಚುಗೆ ಸೂಚಿಸಲು, ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅವರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಲು ತಿರಂಗಾಯಾತ್ರೆ ಹಮ್ಮಿಕೊಳ್ಳಲಾಗಿದೆ. ತಿರಂಗಾಯಾತ್ರೆಯನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಆಚರಿಸುವ ಮೂಲಕ ನಮ್ಮ ಸೈನಿಕರನ್ನು ಅಭಿನಂದಿಸೋಣ. ರಾಜ್ಯದ ವಿವಿಧೆಡೆ ತಿರಂಗಾ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಮೇ 29ರಂದು ಬೃಹತ್ ತಿರಂಗಾಯಾತ್ರೆ ನಡೆಯಲಿದೆ. ಈ ತಿರಂಗಾಯಾತ್ರೆಯಲ್ಲಿ ಎಲ್ಲ ಧರ್ಮದವರು, ಸಮಸ್ತ ದೇಶಾಭಿಮಾನಿಗಳು, ಜನಪ್ರತಿನಿಧಿಗಳು, ನಿವೃತ್ತ ಸೈನಿಕರು, ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯೋಗಿಗಳು, ಸಾರ್ವಜನಿಕರು ಎಲ್ಲರೂ ಪಾಲ್ಗೊಳ್ಳುವಂತೆ ರೂಪಾಲಿ ಎಸ್.ನಾಯ್ಕ, ನಾಗೇಶ ಕುರ್ಡೇಕರ, ಸುಭಾಷ ಗುನಗಿ ಮತ್ತಿತರ ಪ್ರಮುಖರು ವಿನಂತಿಸಿದ್ದಾರೆ.