ಸಾರಾಂಶ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಕಳೆದ 4-5 ವರ್ಷಗಳಿಂದ ಹರ್ ಘರ್ ತಿರಂಗಾ ಹಾಗೂ ತಿರಂಗಾ ಯಾತ್ರೆಯ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಇಲ್ಲಿನ ದುರ್ಗದಬೈಲ್ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ದೇಶದ ಧ್ವಜ ಹಾಗೂ ಸ್ವಾತಂತ್ರ್ಯದ ಇತಿಹಾಸದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಜನರಲ್ಲಿ ದೇಶದ ಬಗ್ಗೆ ಭಾವನಾತ್ಮಕ ಸಂಬಂಧವನ್ನು ಉಂಟು ಮಾಡಲು ಈ ತಿರಂಗಾ ರ‍್ಯಾಲಿಗೆ ಹು-ಧಾ ಅವಳಿ ನಗರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದರು.ಆ. 15ರಂದು ಜಿಲ್ಲೆಯಾದ್ಯಂತ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡದ ಮೇಲೆ ತಿರಂಗಾ ಧ್ವಜ ಹಾರಿಸುವ ಕೆಲಸವನ್ನು ಮಾಡಲಿದ್ದಾರೆ. ಪ್ರತಿಯೊಬ್ಬರೂ ಈ ಹರ್‌ಘರ್ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಸಾರ್ವಜನಿಕರಲ್ಲಿ ಜೋಶಿ ಮನವಿ ಮಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಹಬ್ಬದಂತೆ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ಅವಳಿ ನಗರದಲ್ಲಿ ಬೃಹತ್ ರ‍್ಯಾಲಿ ಹಾಗೂ ಪ್ರತಿಮನೆಗಳಲ್ಲಿ ಧ್ವಜವನ್ನು ಹಾರಿಸುವ ಮೂಲಕ ಆಚರಣೆ ಮಾಡುತ್ತೇವೆ ಎಂದರು.ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಲಿಂಗರಾಜ ಪಾಟೀಲ, ಡಾ. ಕ್ರಾಂತಿಕಿರಣ, ವೆಂಕಟೇಶ ಕಾಟವೆ, ಪ್ರಭು ನವಲಗುಂದಮಠ, ಸತೀಶ ಶೇಜವಾಡಕರ, ಮೇನಕಾ ಹುರಳಿ, ರವಿ ನಾಯಕ, ಅನೂಪ ಬಿಜವಾಡ, ಶಕ್ತಿ ಹಿರೇಮಠ, ಕರಿಯಪ್ಪ ಸುಣಗಾರ ಸೇರಿದಂತೆ ಹಲವರಿದ್ದರು. ತಿರಂಗಾ ಬೈಕ್ ರ‍್ಯಾಲಿ
ನಗರದ ದುರ್ಗದಬೈಲ್ ವೃತ್ತದಿಂದ ಆರಂಭವಾದ ತಿರಂಗಾ ಬೈಕ್ ರ‍್ಯಾಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಬೈಕ್ ಚಲಾಯಿಸುವ ಮೂಲಕ ಚಾಲನೆ ನೀಡಿದರು.ನೂರಾರು ಯುವಕರು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ತಿರಂಗಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿಯ ಉದ್ದಕ್ಕೂ ಘೋಷಣೆಗಳು ಕೇಳಿ ಬಂದವು. ರ‍್ಯಾಲಿಯ ವೇಳೆ ಮಾರ್ಗದಲ್ಲಿ ಎರಡು ಬದಿಯ ಅಂಗಡಿ, ಮುಂಗಟ್ಟುಗಳನ್ನು ಪೊಲೀಸರು ಕೆಲಕಾಲ ಬಂದ್ ಮಾಡಿಸಿದ್ದರು. ನಂತರ ತಿರಂಗಾ ರ‍್ಯಾಲಿಯು ಚೆನ್ನಮ್ಮ ವೃತ್ತಕ್ಕೆ ಆಗಮಿಸಿ, ಸಮಾವೇಶಗೊಂಡು ಮುಕ್ತಾಯವಾಯಿತು.
ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ: ಜೋಶಿಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ್ ಅವರಿಗೆ ಪ್ರಭಾವಿಯೊಬ್ಬರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಬೆದರಿಕೆ ಹಾಕಿದವರು ಯಾರೇ ಆಗಿರಲಿ ಅವರ ಮೇಲೆ ಪೊಲೀಸರು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರಿಗಾದರೂ ಜೀವ ಭಯ ಕಾಡುತ್ತಿದ್ದರೆ ಸರ್ಕಾರ ಮತ್ತು ಸ್ಥಳೀಯ ಪೊಲೀಸರು ರಕ್ಷಣೆ ಒದಗಿಸುವ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.