ಶನಿವಾರಸಂತೆ : ಮೈಕ್ರೋ ಫೈನಾನ್ಸ್ ಸಾಲದ ಒತ್ತಡಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

| N/A | Published : Feb 13 2025, 12:49 AM IST / Updated: Feb 13 2025, 12:52 PM IST

ಸಾರಾಂಶ

ಮೈಕ್ರೋ ಫೈನಾನ್ಸ್‌ಗೆ ಸಂಬಂಧಪಟ್ಟ ವಿವಿಧ ಸಂಘಗಳಲ್ಲಿ ಸಾಲ ಪಡೆದು ಮೈಕ್ರೋ ಫೈನಾನ್ಸ್‌ ಸಾಲದ ಒತ್ತಡಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಶನಿವಾರಸಂತೆ :  ಮೈಕ್ರೋ ಫೈನಾನ್ಸ್‌ಗೆ ಸಂಬಂಧ ಪಟ್ಟ ವಿವಿಧ ಸಂಘಗಳಲ್ಲಿ ಸಾಲ ಪಡೆದು ಮೈಕ್ರೋ ಫೈನಾನ್ಸ್ ಸಾಲದ ಒತ್ತಡಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ನಡೆದಿದೆ.

ಗುಂಡೂರಾವ್ ಬಡಾವಣೆ ನಿವಾಸಿ ಹಸೀನಾ[50] ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಹಸೀನಾ ಶನಿವಾರಸಂತೆ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಪತಿ ಖಾಸಿಂ ಗಾರೆ ಕೆಲಸಕ್ಕೆ ಹೋಗುತ್ತಾರೆ ಹಸೀನಾಗೆ ಮೂವರು ಮಕ್ಕಳಿದ್ದು ಹಿರಿಯ ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದಾರೆ. 

ಇಬ್ಬರು ಪುತ್ರರು ಶನಿವಾರಸಂತೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಸಾರ ನಿರ್ವಹಣೆಗೆ ಕಷ್ಟವಾಗುತ್ತಿದ್ದ ಹಿನ್ನಲೆಯಲ್ಲಿ ಹಸೀನಾ ಮೈಕ್ರೋ ಫೈನಾನ್ಸ್‌ಗೆ ಸಂಬಂಧ ಪಟ್ಟ ಸಂಘಗಳಲ್ಲಿ ಸಾಲ ಪಡೆದಿದ್ದರು. ಈ ಹಿನ್ನಲೆಯಲ್ಲಿ ಹಸೀನಾ ಪ್ರತಿ ತಿಂಗಳು ಸುಮಾರು 45 ರಿಂದ 50 ಸಾವಿರ ರು. ನಷ್ಟು ಸಾಲವನ್ನು ಕಟ್ಟ ಬೇಕಾಗಿತ್ತು. ಅದರಂತೆ ಹಸೀನಾ ಬುಧವಾರ ವಿವಿಧ ಸಂಘಗಳಿಗೆ ಸಾಲದ ಹಣ ಪಾವತಿಸಬೇಕಿತ್ತು. ಈ ಸಂಬಂಧ ಬುಧವಾರ ಬೆಳಗ್ಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಸೀನಾಗೆ ಹಣ ಕಟ್ಟುವಂತೆ ಹೇಳಿದ್ದರು. ಹಣ ಹೊಂದಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಹಸೀನಾ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಬಾತ್ ರೂಮ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಈ ಕುರಿತು ಹಸೀನಾ ಪತಿ ಖಾಸಿಂ ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.