ಸಾರಾಂಶ
ತೀರ್ಥಹಳ್ಳಿ: ಪಪಂಯ ಚುನಾಯಿತ ಸದಸ್ಯರೇ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಶುಕ್ರವಾರ ನಡೆದ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ನಾಮ ನಿರ್ದೆಶಿತ ಸದಸ್ಯರ ಹಕ್ಕಿನ ವಿಚಾರದವರೆಗೂ ಸಭೆಯಲ್ಲಿ ವಾಗ್ವಾದ ನಡೆಯಿತು.ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಬಿಜೆಪಿ ಸದಸ್ಯ ರವೀಶ್ ಬಾಬಿ ಮಾತನಾಡಿ, ಸಾರ್ವಜನಿಕರೊಬ್ಬರ ಕೆಲಸಕ್ಕೆ ಸಂಬಂಧಿಸಿ ಪಪಂಯ ಚುನಾಯಿತ ಸದಸ್ಯರೊಬ್ಬರು ಪಪಂ ಸಿಬ್ಬಂದಿಗೆ ಹಣ ನೀಡುವಂತೆ ಸೂಚಿಸಿದ್ದಾರೆ ಎಂದು ಮಾಹಿತಿ ಇದೆ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಸಂದೇಶ್ ಜವಳಿ ಜನರಿಂದ ಆಯ್ಕೆಯಾಗಿರುವ ನಾವುಗಳೇ ಇಂತಹಾ ಬೆಳವಣಿಗೆಗೆ ಉತ್ತೇಜನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಸದಸ್ಯರು, ಇದೊಂದು ಆಧಾರ ರಹಿತವಾದ ಆರೋಪವಾಗಿದೆ. ದುರುದ್ದೇಶದಿಂದ ಈ ಆರೋಪ ಮಾಡಲಾಗಿದೆ. ಇಂತಹ ಆರೋಪಗಳು ಹಿಂದೆಯೂ ನಡೆದಿದ್ದು ಈ ಆರೋಪ ನಿರಾಧಾರವಾಗಿದೆ ಎಂದು ತಿರುಗೇಟು ನೀಡಿದರು.ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಪರ ವಿರೋಧ ವ್ಯಕ್ತವಾಯ್ತು. ವಾಗ್ವಾದದ ಮಧ್ಯೆ ಪ್ರವೇಶಿಸಿ ಮಾತನಾಡಿದ ಸರ್ಕಾರದ ನಾಮನಿರ್ದೆಶಿತ ಸದಸ್ಯ ಬಿ.ಆರ್.ರಾಘವೇಂದ್ರ ಶೆಟ್ಟಿ ಹಣ ಕೇಳಿರುವವರು ನಿಮ್ಮ ಪಕ್ಷದವರೇ ಇರಬಹುದು ಎಂದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರಾದ ರವೀಶ್ ಬಾಬಿ ಮತ್ತು ಯತಿರಾಜ್, ನಾಮ ನಿರ್ದೇಶಿತ ಸದಸ್ಯರಾದ ನೀವು ನಿಯಮವನ್ನು ಮೀರಿ ಮಾತನಾಡುತ್ತಿದ್ದೀರಿ ಎಂದರು. ಕಾಂಗ್ರೆಸ್ ಸದಸ್ಯರಾದ ಜೈಪ್ರಕಾಶ್ ಶೆಟ್ಟಿ, ಬಿ.ಗಣಪತಿ, ಡಾ.ಅನಿಲ್ ಸದಸ್ಯರ ಹಕ್ಕಿನ ವಿಚಾರವನ್ನು ಎತ್ತಿರುವುದನ್ನು ಖಂಡಿಸಿದರು.ಶೂನ್ಯ ಅವಧಿಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಸಂದೇಶ್ ಜವಳಿ, ರಾಜ್ಯ ಸರ್ಕಾರ ಇ-ಖಾತಾ ತಿದ್ದುಪಡಿಗೆ ಸಂಬಂಧಿಸಿ ಆದೇಶ ನೀಡಿರುವುದನ್ನು ಪ್ರಶಂಸಿಸಿ, ಇದೊಂದು ಮಹತ್ತರ ತೀರ್ಮಾನವಾಗಿದೆ. ಈ ಬಗ್ಗೆ ವಿಶೇಷ ಸಭೆ ಕರೆದು ಪಪಂ ಸದಸ್ಯರುಗಳಿಗೆ ಕಾರ್ಯಾಗಾರದ ಮೂಲಕ ಮಾಹಿತಿ ನೀಡಬೇಕು ಎಂದು ಹೇಳಿದರು. ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.ಪಪಂಯ ಹಲವಾರು ಕಾಮಗಾರಿಗಳನ್ನು ಗುತ್ತಿಗೆ ಪಡೆದು, ಯಾವ ಕಾಮಗಾರಿಯನ್ನೂ ಕ್ರಮಬದ್ಧವಾಗಿ ಮಾಡದಿರುವ ಮತ್ತು ಪಪಂಯ ಸಂಪರ್ಕಕ್ಕೂ ಸಿಗದ ಗುತ್ತಿಗೆದಾರ ಅನಿಲ್ ಕುಮಾರ್‌ರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುವುದು, ಪಪಂಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸುವಂತೆ ತೀರ್ಮಾನಿಸಲಾಯಿತು.
ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್ ವೇದಿಕೆಯಲ್ಲಿದ್ದರು.ಅಶೋಕ ಸ್ತಂಭ ಗಾಂಧಿಚೌಕದಲ್ಲಿ ಸ್ಥಾಪಿಸಿರಸ್ತೆ ಅಗಲೀಕರಣದ ವೇಳೆ ತಾಲೂಕು ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಗಿದ್ದ ಅಶೋಕ ಸ್ತಂಭವನ್ನು ಪುನಃ ಪಟ್ಟಣದ ಗಾಂಧಿಚೌಕದಲ್ಲಿ ಸ್ಥಾಪಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸ್ಮರಣಾರ್ಥ ನಿರ್ಮಿಸಲಾಗಿದ್ದ ಈ ಹೆಮ್ಮೆಯ ಲಾಂಛನ ಪಟ್ಟಣದ ಹೃದಯ ಭಾಗದಲ್ಲೇ ಇರುವುದು ಶೋಭೆ ಎಂದು ಸದಸ್ಯರಾದ ಜ್ಯೋತಿ ಮೋಹನ್ ಒತ್ತಾಯಿಸಿದರು.
ವರ್ತಕರ ಸಂಘದಿಂದ ಮನವಿ: ಪಪಂ ಸಾಮಾನ್ಯ ಸಭೆಗೆ ಆಗಮಿಸಿ ಮನವಿ ನೀಡಿದ ವರ್ತಕರ ಸಂಘದ ಸದಸ್ಯರು, ಪಪಂ ವ್ಯಾಪ್ತಿಯಲ್ಲಿ ತರಕಾರಿ ಹಣ್ಣುಗಳ ಬೀದಿ ವ್ಯಾಪಾರಿಗಳಿಂದಾಗಿ ಪಟ್ಟಣದ ವರ್ತಕರ ವ್ಯವಹಾರಗಳಿಗೆ ತೀವ್ರ ಅಡಚಣೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.