ತಿರುಮಲೆ ಶ್ರೀ ರಂಗನಾಥಸ್ವಾಮಿ ವಿಜೃಂಭಣೆಯ ತಿಂಗಳ ತೇರು

| Published : May 14 2024, 01:04 AM IST

ತಿರುಮಲೆ ಶ್ರೀ ರಂಗನಾಥಸ್ವಾಮಿ ವಿಜೃಂಭಣೆಯ ತಿಂಗಳ ತೇರು
Share this Article
  • FB
  • TW
  • Linkdin
  • Email

ಸಾರಾಂಶ

ನಾರಾಯಣಪ್ಪ ಕುಟುಂಬದವರು ಶ್ರೀರಂಗನಾಥಸ್ವಾಮಿ ರಥಕ್ಕೆ ಶ್ರದ್ಧಾ ಭಕ್ತಿಯಿಂದ ಪ್ರಥಮ ಪೂಜೆ ಸಲ್ಲಿಸಿದರು. ನೂರಾರು ವರ್ಷಗಳಿಂದ ವಂಶ ಪರಂಪರಾಗತವಾಗಿ ತಿಂಗಳ ತೇರು ಸೇವಾಕರ್ತರಾದ ದಿವಂಗತ ಜವರಪ್ಪನವರ ವಂಶಸ್ಥರಾದ ನಾರಾಯಣಪ್ಪ ಸಹೋದರರು ತಿಂಗಳ ರಥಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ತೇರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಪ್ರಸಿದ್ಧ ತಿರುಮಲೆ ಶ್ರೀ ರಂಗನಾಥಸ್ವಾಮಿಯ ತಿಂಗಳ ತೇರು ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಬ್ರಹ್ಮರಥೋತ್ಸವ ಮಾಡಿದ ಬಳಿಕ ಶ್ರೀರಂಗನಾಥಸ್ವಾಮಿಯ ತಿಂಗಳ ತೇರು ನೆರವೇರಿಸುವುದು ಇಲ್ಲಿನ ಸಂಪ್ರದಾಯ. ತಿಂಗಳ ತೇರು ಪ್ರಯುಕ್ತ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ಸವ ಮೂರ್ತಿಯನ್ನು ಚಿಕ್ಕತೇರಿನಲ್ಲಿ ಕೂರಿಸಿ ರಥವನ್ನು ಭಕ್ತರು ರಥಬೀದಿಯ ಸುತ್ತಲು ಮಂಗಳವಾದ್ಯದೊಂದಿಗೆ ರಥ ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.ಪ್ರತಿ ವರ್ಷದಂತೆ ತಿರುಮಲೆ ಶ್ರೀರಂಗನಾಥಸ್ವಾಮಿಯ ತಿಂಗಳ ತೇರಿನ ಸೇವಾಕರ್ತ ಹೊಸಪೇಟೆ ಡ್ರೈವರ್ ನಾರಾಯಣಪ್ಪ ಈ ವರ್ಷವೂ ಚಾಲನೆ ನೀಡಿ ಮಾತನಾಡಿ, ಮಾಗಡಿ ರಂಗನಾಥಸ್ವಾಮಿ ಕೃಪೆಯಿಂದ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಈ ವರ್ಷ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬಂದು ರೈತರು, ತಾಲೂಕಿನ ಜನರು ಆರೋಗ್ಯ ಭಾಗ್ಯ, ಸುಖ, ಶಾಂತಿ, ನೆಮ್ಮದಿಯ ಜೀವನ ನಡೆಸಬೇಕು ಎಂದು ಆ ಭಗವಂತ ರಂಗನಾಥಸ್ವಾಮಿಯಲ್ಲಿ ಪ್ರಾರ್ಥಿಸುತ್ತಿದ್ದೇನೆ. ಬಹಳಷ್ಟು ವರ್ಷಗಳಿಂದ ನಮ್ಮ ಕುಟುಂಬ ದೇವರ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದೆ. ಮುಂದೆಯೂ ಭಗವಂತನ ಅನುಗ್ರಹ ಇರುವವರೆಗೂ ದೇವರ ಸೇವೆ ಮಾಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ನಾರಾಯಣಪ್ಪ ಕುಟುಂಬದವರು ಶ್ರೀರಂಗನಾಥಸ್ವಾಮಿ ರಥಕ್ಕೆ ಶ್ರದ್ಧಾ ಭಕ್ತಿಯಿಂದ ಪ್ರಥಮ ಪೂಜೆ ಸಲ್ಲಿಸಿದರು. ನೂರಾರು ವರ್ಷಗಳಿಂದ ವಂಶ ಪರಂಪರಾಗತವಾಗಿ ತಿಂಗಳ ತೇರು ಸೇವಾಕರ್ತರಾದ ದಿವಂಗತ ಜವರಪ್ಪನವರ ವಂಶಸ್ಥರಾದ ನಾರಾಯಣಪ್ಪ ಸಹೋದರರು ತಿಂಗಳ ರಥಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ತೇರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತೇರಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥಗಳಿಗಾಗಿ ಹರಕೆ ಹೊತ್ತವರು ರಥ ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.

ರಥೋತ್ಸವದ ಅಂಗವಾಗಿ ಶ್ರೀ ರಂಗನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು, ದೇವಸ್ಥಾನದ ಅರ್ಚಕರಾದ ವೆಂಕಟೇಶ ಅಯ್ಯಂಗಾರ್, ಕೃಷ್ಣ ಅಯ್ಯಂಗಾರ್, ಶ್ರೀಶೈಲ ಭಟ್ ಇತರೆ ಅರ್ಚಕರು ಧಾರ್ಮಿಕ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ರಥೋತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ರಥೋತ್ಸವದಲ್ಲಿ ಸೇವಾಕರ್ತ ನಾರಾಯಣಪ್ಪ, ಪುರಸಭಾ ಸದಸ್ಯ ಎಚ್.ಜೆ.ಪುರಷೋತ್ತಮ್, ರಘು, ವಿವೇಕ್ ಗೌಡ, ಟಿ.ಎಸ್.ಪ್ರಭು, ಕಾಂತರಾಜ್, ಚಂದ್ರಣ್ಣ, ಪ್ರವೀಣ್, ರಂಗಸ್ವಾಮಿ, ನಾಗರಾಜು, ಕುಮಾರ್, ಸುಶೀಲಮ್ಮ, ರುಕ್ಮಿಣಿ ಸೇರಿದಂತೆ ಇತರರು ಭಾಗವಹಿಸಿದ್ದರು.