ಸಾರಾಂಶ
ಮೇ 20ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಹಿರೇಕೆರೂರು ಪಟ್ಟಣದಲ್ಲಿ ಶಾಸಕ ಯು.ಬಿ. ಬಣಕಾರ ಪೂರ್ವಭಾವಿ ಸಭೆ ನಡೆಸಿದರು. ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕುರಿತು ಮಾಹಿತಿ ನೀಡಿದರು.
ಹಿರೇಕೆರೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸರ್ಕಾರದ ವತಿಯಿಂದ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಸಾಧನಾ ಸಮಾವೇಶದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಎಲ್ಲ ಇಲಾಖೆ ಅಡಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಕಾರ್ಯಗತಗೊಳಿಸಿದೆ. ಅವುಗಳಲ್ಲಿ ಮುಖ್ಯವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯ ಜವಾಬ್ದಾರಿ ಹೊತ್ತ ಬಳಿಕ ಅನೇಕ ಒಳ್ಳೆಯ ಹಾಗೂ ಜನಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿ, ಜನತೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.ಮುಖ್ಯವಾಗಿ ಪೋಡಿಮುಕ್ತ ಗ್ರಾಮ ಅಭಿಯಾನ, ಎಲ್ಲ ಗ್ರಾಮಗಳಲ್ಲಿ ಬಹು ಮಾಲೀಕತ್ವದ ಖಾತೆಗಳ ಪಹಣಿಗಳನ್ನು ಪ್ರತ್ಯೇಕಗೊಳಿಸಿ ಏಕ ಮಾಲೀಕತ್ವದ ಖಾತೆಗಳನ್ನಾಗಿ ಸೃಜನೆ ಮಾಡಿರುವುದು ಹಾಗೂ ಬಹು ದಶಕಗಳಿಂದ ಬಾಕಿ ಉಳಿದ ಈ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ. ದಾಖಲೆಗಳಲ್ಲಿ ಬಹಳಷ್ಟು ವರ್ಷಗಳಿಂದ ಹಾಗೆ ಉಳಿದುಕೊಂಡ ಪೋತಿದಾರರ ಹೆಸರು ಕಡಿಮೆ ಮಾಡಿ ವಾರಸುದಾರರ ಹೆಸರು ದಾಖಲು ಮಾಡಲು ಆದೇಶ ನೀಡಲಾಗಿದೆ. ಈ ರೀತಿ ಕಂದಾಯ ಗ್ರಾಮ ರಚನೆ ಮಾಡಿ, ಹಕ್ಕುಪತ್ರ ಕೊಡುವ ಸಮಾವೇಶ ಇದಾಗಿದೆ ಎಂದರು.
ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಹಿರೇಕೆರೂರು ತಾಲೂಕಿನ 8 ಮಾರ್ಗಗಳಲ್ಲಿ 400 ಫಲಾನುಭವಿಗಳು ಹಾಗೂ ರಟ್ಟಿಹಳ್ಳಿ ತಾಲೂಕಿನಿಂದ 10 ಮಾರ್ಗವಾಗಿ 500 ಫಲಾನುಭವಿಗಳು ಒಟ್ಟು 900 ಫಲಾನುಭವಿಗಳು ಸಮಾವೇಶದಲ್ಲಿ ಭಾಗವಹಿಸಿ, ದಾಖಲೆ ಪತ್ರ ಪಡೆಯಲಿದ್ದಾರೆ. ಸರ್ಕಾರ ಕಂದಾಯ ಇಲಾಖೆ ಅತಿ ಮಹತ್ವದ ಸಮವೇಶವಾಗಿದೆ ಎಂದರು.ಹಿರೇಕೆರೂರು ತಹಸೀಲ್ದಾರ್ ಎಚ್. ಪ್ರಭಾಕರಗೌಡ, ರಟ್ಟಿಹಳ್ಳಿ ತಹಸೀಲ್ದಾರ್ ಶ್ವೇತಾ ಅಮರಾವತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.