ಸಾರಾಂಶ
ಸಿದ್ದಾಪುರ: ಒಂದು ಕಾಲದಲ್ಲಿ ಅತ್ಯಂತ ಕಡಿಮೆ ಬಂಡವಾಳದಲ್ಲಿ ಪ್ರಾರಂಭವಾಗಿರುವ ಟಿಎಂಎಸ್ ಸಂಸ್ಥೆ ಹೆಮ್ಮರವಾಗಿ ಬೆಳೆದಿದ್ದು, ೩ ಸಾವಿರಕ್ಕೂ ಹೆಚ್ಚು ಸದಸ್ಯರನ್ನು, ೨ ಸಾವಿರಕ್ಕೂ ಹೆಚ್ಚು ನಾಮಿನಲ್ ಸದಸ್ಯರನ್ನು ಹೊಂದಿದೆ. ಮಾ. ೩೧ಕ್ಕೆ ಮುಗಿದ ಆರ್ಥಿಕ ವರ್ಷ ೨೦೨೩- ೨೪ನೇ ಸಾಲಿನಲ್ಲಿ ನಿಧಿಗಳನ್ನು ತೆಗೆದಿರಿಸಿದ ನಂತರ ಸಂಸ್ಥೆ ₹೪.೩೪ ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ತಿಳಿಸಿದರು.ಶನಿವಾರ ಸಂಘದ ವ್ಯಾಪಾರಾಂಗಣದಲ್ಲಿ ನಡೆದ ವಾರ್ಷಿಕ ಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಸ್ಥೆಯಲ್ಲಿ ಕಡುಬಡವರು, ಬಡವರು ಹಾಗೂ ಸಾಮಾನ್ಯ ಜನತೆ ಹೆಚ್ಚಾಗಿ ವ್ಯವಹರಿಸುತ್ತಿದ್ದಾರೆ. ಕಾನಸೂರು ಹಾಗೂ ಶಿರಸಿಯಲ್ಲಿ ಶಾಖೆಗಳನ್ನು ಹೊಂದಿರುವ ಸಂಘ ೨೦೨೩- ೨೪ನೇ ಸಾಲಿನಲ್ಲಿ ೫೬,೫೫೪ ಕ್ವಿಂಟಲ್ ಅಡಕೆ, ೩೮೯ ಕ್ವಿಂಟಲ್ ಕಾಳುಮೆಣಸು ಹಾಗೂ ೨,೭೯೨ ಕ್ವಿಂಟಲ್ ಹಸಿ ಅಡಕೆ ವಿಕ್ರಿ ಮಾಡಿದ್ದು, ಸಂಘದ ವಹಿವಾಟು ₹೨೩೩.೦೫ ಕೋಟಿ ಆಗಿದೆ. ದುಡಿಯುವ ಬಂಡವಾಳ ₹೨೧೮.೬೧ ಕೋಟಿಗೂ ಅಧಿಕವಾಗಿದೆ. ಸಂಚಿತ ನಿಧಿಗಳ ಮೊತ್ತ ₹೬೦.೭೯ ಕೋಟಿಯಷ್ಟಿದೆ. ₹೧೦೮.೨೯ ಕೋಟಿ ಠೇವುಗಳನ್ನು ಸಂಗ್ರಹಿಸಲಾಗಿದೆ ಎಂದರು.
೨೦೨೩- ೨೪ನೇ ಸಾಲಿನಲ್ಲಿ ಸದಸ್ಯರಿಗೆ ಶೇ. ೧೫ ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ.ಈ ಸಂದರ್ಭದಲ್ಲಿ ಆಯ್ದ ಹಿರಿಯ ಸದಸ್ಯರನ್ನು ಹಾಗೂ ಎಸ್ಎಸ್ಎಲ್‌ಸಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಹೆಚ್ಚಿನ ಸಾಧನೆ ಮಾಡಿದ ದೊಡ್ಮನೆ ಸೇವಾ ಸಹಕಾರಿ ಸಂಘ, ತಾರೇಹಳ್ಳಿ- ಕಾನಸೂರ ಸಂಘ, ಹೆಗ್ಗರಣಿ ಸೇವಾ ಸಹಕಾರಿ ಬ್ಯಾಂಕ್ ಇವುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.
ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಧಾನ ವ್ಯವಸ್ಥಾಪಕ ಸತೀಶ ಹೆಗಡೆ ಇದ್ದರು. ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ ಸ್ವಾಗತಿಸಿದರು. ಸಂಘದ ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಕೆರೆಹೊಂಡ ಹಾಗೂ ಜಿ.ಜಿ. ಹೆಗಡೆ ಬಾಳಗೋಡ ನಿರ್ವಹಿಸಿದರು. ನಿರ್ದೇಶಕ ಜಿ.ಎಂ. ಭಟ್ಟ ಕಾಜಿನಮನೆ ವಂದಿಸಿದರು. ಸಭೆಯ ನಂತರ ಬೆಂಗಳೂರಿನ ಯಕ್ಷಸಿರಿಯವರಿಂದ ಕೃಷ್ಣಾರ್ಜುನ ಕಾಳಗ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.