ಟಿಎಂಎಸ್ ಸಂಸ್ಥೆಗೆ ₹5 ಕೋಟಿ ನಿವ್ವಳ ಲಾಭ

| Published : Jul 22 2025, 01:15 AM IST

ಸಾರಾಂಶ

ಕಳೆದ ೧೦ ವರ್ಷದ ಹಿಂದಿನ ಸ್ಥಿತಿಗತಿ ಗಮನಿಸಿದರೆ ನಮ್ಮ ಸಂಸ್ಥೆ ಹಂತ ಹಂತವಾಗಿ ಎರಡು ಪಟ್ಟು ಹೆಚ್ಚಿನ ವ್ಯವಹಾರ ನಡೆಸಿದೆ.

ಯಲ್ಲಾಪುರ: ತಾಲೂಕು ಮಾರ್ಕೆಟಿಂಗ್ ಸೊಸೈಟಿ ಪ್ರಸಕ್ತ ಸಾಲಿನಲ್ಲಿ 5.22 ಕೋಟಿ ನಿವ್ವಳ ಲಾಭ ಗಳಿಸಿ, ಸಂಸ್ಥೆಯ ಇತಿಹಾಸದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಎಲ್ಲ ವಿಭಾಗಗಳಲ್ಲಿಯೂ ಲಾಭಾಂಶ ಗಳಿಸಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಅವರು ಸೋಮವಾರ ಟಿಎಂಎಸ್ ಆಡಳಿತ ಸಭಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಳೆದ ೧೦ ವರ್ಷದ ಹಿಂದಿನ ಸ್ಥಿತಿಗತಿ ಗಮನಿಸಿದರೆ ನಮ್ಮ ಸಂಸ್ಥೆ ಹಂತ ಹಂತವಾಗಿ ಎರಡು ಪಟ್ಟು ಹೆಚ್ಚಿನ ವ್ಯವಹಾರ ನಡೆಸಿದೆ. ನಮಗೆ ಟಿಎಸ್ಎಸ್‌ನಿಂದ ತೀವ್ರ ಸ್ಪರ್ಧೆ ಇದ್ದರೂ ಮತ್ತು ಉಮ್ಮಚಗಿ ಸೇವಾ ಸಹಕಾರಿ ಸಂಘ ಅಡಿಕೆ ಖರೀದಿ ಪ್ರಾರಂಭ ಮಾಡಿರುವುದರಿಂದ ಸುತ್ತಮುತ್ತಲಿನ ಅಡಕೆ ಕಡಿಮೆ ಬಂದರೂ ನಿರೀಕ್ಷೆ ಮೀರಿ ನಮ್ಮ ರೈತರು ವಿಶ್ವಾಸದಿಂದ ನಮ್ಮಲ್ಲೇ ಅಡಕೆ ವಿಕ್ರಿಯ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ರೈತರು ವಿಶ್ವಾಸದಿಂದ ನಮ್ಮ ಸಂಸ್ಥೆಗೆ ಅಡಕೆ ತರುತ್ತಿದ್ದಾರೆ. ನಮಗೆ ಅಡಕೆ ಇಟ್ಟುಕೊಳ್ಳುವುದೇ ಸವಾಲಾಗಿದೆ. ಎಪಿಎಂಸಿ ಆವಾರದಲ್ಲಿ ೧೦ ಗುಂಟೆ ಜಾಗವನ್ನು ಸರ್ಕಾರದಿಂದ ಮಂಜೂರು ಪಡೆದಿದ್ದೇವೆ. ಅಲ್ಲಿ ಬೃಹತ್ ಕಟ್ಟಡ ನಿರ್ಮಿಸುತ್ತೇವೆ. ಅದಕ್ಕಾಗಿ ₹೧೩ ಕೋಟಿ ಮೌಲ್ಯದ ಕಟ್ಟಡ ನಿಧಿ ಇದೆ. ಅನೇಕರ ಆಕ್ಷೇಪದ ನಡುವೆಯೂ ಪೆಟ್ರೋಲ್ ಬಂಕಿಗೆ ಟ್ಯಾಂಕರ್ ಖರೀದಿ, ಸೂಪರ್ ಮಾರ್ಟ್‌ಗಳಿಗೂ ಆಕ್ಷೇಪಗಳಿತ್ತು. ಆದರೆ ಈ ಎಲ್ಲ ವಿಭಾಗಗಳೂ ಲಾಭ ನೀಡಿದೆ ಎಂದರು.

ಮುಖ್ಯ ಕಾರ್ಯನಿರ್ವಾಹಕ ವಿ.ಟಿ.ಹೆಗಡೆ ತೊಂಡೇಕೆರೆ ಮಾತನಾಡಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ವೆಂಕಟ್ರಮಣ ಬೆಳ್ಳಿ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಕಿರುಕುಂಭತ್ತಿ ಉಪಸ್ಥಿತರಿದ್ದರು.