ಹವಾಮಾನ ವೈಪರೀತ್ಯ ಹಾಗೂ ಎಲೆಚುಕ್ಕಿ ರೋಗದಂತಹ ಸವಾಲುಗಳ ನಡುವೆಯೂ ಶಿರಸಿ ಟಿಎಂಎಸ್ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು, ಒಟ್ಟು 2,26,01,845.82 ನಿವ್ವಳ ಲಾಭ ಗಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಾಹಿತಿಕನ್ನಡಪ್ರಭ ವಾರ್ತೆ ಶಿರಸಿ

ಹವಾಮಾನ ವೈಪರೀತ್ಯ ಹಾಗೂ ಎಲೆಚುಕ್ಕಿ ರೋಗದಂತಹ ಸವಾಲುಗಳ ನಡುವೆಯೂ ಶಿರಸಿ ಟಿಎಂಎಸ್ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು, ಒಟ್ಟು ₹2,26,01,845.82 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ್ ತಿಳಿಸಿದರು.

ಬುಧವಾರ ನಗರದ ಟಿಎಂಎಸ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಸಂಘದ 43ನೇ ವರ್ಷದ ವಾರ್ಷಿಕ ಮಹಾಸಭೆಯ ಸಂದರ್ಭ ಬಿಡುಗಡೆಯಾದ ವರದಿಯ ಪ್ರಕಾರ, ಸಂಘದ ಒಟ್ಟು ವಹಿವಾಟು ₹564,95,46,289.42ಕ್ಕೆ ತಲುಪಿದ್ದು, ಸ್ವಂತ ಬಂಡವಾಳ ₹60,09,07,838.09 ಹಾಗೂ ಸದಸ್ಯರ ಠೇವಣಿ ₹124,27,59,185.00 ಸಂಗ್ರಹವಾಗಿದೆ. ನೇರ ಖರೀದಿ ವಿಭಾಗದ ಮೂಲಕ ಸದಸ್ಯರಿಂದ ಟೆಂಡರ್‌ನಲ್ಲಿ 27,089.72 ಕ್ವಿಂಟಲ್ ಅಡಕೆ ಹಾಗೂ ಕಾಳುಮೆಣಸು ಖರೀದಿಸಿ ₹136.14 ಕೋಟಿಗೂ ಅಧಿಕ ವ್ಯವಹಾರದ ಮೂಲಕ ₹ 80,21,421.51 ನಿವ್ವಳ ಲಾಭ ಗಳಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ ಎಲೆಚುಕ್ಕಿ ರೋಗದಿಂದ ತತ್ತರಿಸಿದ ರೈತರಿಗೆ ನೆರವಾಗಲು ಸಂಘವು ಸುಮಾರು 200 ಸದಸ್ಯರಿಗೆ ಅಧ್ಯಯನ ಪ್ರವಾಸ ಆಯೋಜಿಸಿದ್ದು, ಬಾಗಲಕೋಟೆಯ ತೋಟಗಾರಿಕಾ ಕಾಲೇಜಿನ ಸಹಯೋಗದೊಂದಿಗೆ 40,000 ಕಾಳುಮೆಣಸು ಗಿಡ ಮತ್ತು 20,000 ಚಂದ್ರಗಿರಿ ಕಾಫಿ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ ಎಂದರು.

ಸದಸ್ಯರ ಉತ್ಪನ್ನಗಳ ಸಂಗ್ರಹಣೆಗಾಗಿ ದಾಸನಕೊಪ್ಪ ಶಾಖೆಯಲ್ಲಿ 5,700 ಚ.ಅಡಿಯ ಗೋದಾಮು ನಿರ್ಮಿಸಿ ಉದ್ಘಾಟಿಸಲಾಗಿದ್ದು, 30,000 ಚ.ಅಡಿಗೂ ಹೆಚ್ಚಿನ ವಿಸ್ತೀರ್ಣದ ನಾಲ್ಕು ಅಂತಸ್ತಿನ ಬೃಹತ್ ಗೋದಾಮಿನ ನಿರ್ಮಾಣ ಕಾರ್ಯದಲ್ಲಿ ಈಗಾಗಲೇ 12,000 ಚ.ಅಡಿಯಷ್ಟು ಭಾಗ ಪೂರ್ಣಗೊಂಡಿದೆ. ಹಸಿ ಅಡಕೆ ವ್ಯವಹಾರಕ್ಕಾಗಿ ಶಿರಸಿಯ ಚಿಪಗಿ ಗ್ರಾಮದಲ್ಲಿ 22 ಗುಂಟೆ ಜಾಗವನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಬನವಾಸಿ ಹಾಗೂ ದಾಸನಕೊಪ್ಪ ಶಾಖೆಗಳು ಸಹ ಲಾಭ ಗಳಿಸಿವೆ. ಅಲ್ಲದೆ ಎಪಿಎಂಸಿ ಶಿರಸಿಯಿಂದ 10 ವರ್ಷಗಳ ಲೀಸ್ ಮೇಲೆ ಪಡೆದ ಜಮೀನನ್ನು ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಆ ಜಾಗದಲ್ಲಿ ಧೃತ-ಭ್ರಷ್ಟ, ಪಶು ಆಹಾರ ತಯಾರಿಕಾ ಘಟಕ, ಭೂ-ಸುರಕ್ಷಾ ಸಾವಯವ ಗೊಬ್ಬರ ತಯಾರಿಕಾ ಘಟಕ ಹಾಗೂ ಹಸಿ ಅಡಿಕೆ ಪ್ರೊಸೆಸಿಂಗ್ ಯೂನಿಟ್ ಆರಂಭಿಸಲು ಚಿಂತಿಸಲಾಗಿದೆ ಎಂದರು.

ಆ. 26ರಂದು ವಾರ್ಷಿಕ ಸರ್ವ ಸಾಧಾರಣ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು

ಸಂಘದ ಸಭಾಮಂಡಲದಲ್ಲಿ ಮಧ್ಯಾಹ್ನ 3.30ಕ್ಕೆ ಜರುಗಲಿದೆ ಎಂದು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಕಂಡ ಮಾತನಾಡಿದರು.

ಈ ಸಂದರ್ಭ ಜಿ.ಎಂ. ಹೆಗಡೆ ಹುಲಗೋಳ, ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ವಿನಯ್ ಹೆಗಡೆ, ನಿರ್ದೇಶಕರು, ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.