ಉನ್ನತ ಸ್ಥಾನ ಪಡೆಯಲು ಗುರಿ, ಛಲ ಅವಶ್ಯ

| Published : May 16 2025, 01:57 AM IST

ಸಾರಾಂಶ

ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆವರೆಗೂ ಉಳಿಯಲ್ಲ. ಆದರೆ ಕಲಿತ ವಿದ್ಯೆ ಮಾತ್ರ ನಮ್ಮ ಜೀವಿತದ ಕೊನೆಯವರೆಗೂ ಜೊತೆಗಿರುತ್ತದೆ ಎಂದು ಹಿರೇಮಠದ ಶರಣಬಸವ ಶಿವಾಚಾರ್ಯರು ಅಭಿಪ್ರಾಯಪಟ್ಟರು.ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಸರ್ಕಾರಿ ಪ್ರೌಢಶಾಲೆಯ 1999-2000ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಉನ್ನತ ಶಿಕ್ಷಣ ಪಡೆದ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದರೆ ಅದರ ಹಿಂದೆ ಈ ಸಮಾಜದ ಕೂಲಿ, ಕಾರ್ಮಿಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಅಡಗಿರುತ್ತದೆ. ಅವರು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಖರ್ಚು ಮಾಡುವ ಮೂಲಕ ಕಟ್ಟಿದ ತೆರಿಗೆ ಹಣದಿಂದಲೆ ನಾವು ಈ ಸ್ಥಾನಕ್ಕೇರಿದ್ದೇವೆ ಎಂಬುದನ್ನು ಮರೆಯಬಾರದು ಎಂದರು.

ನಿವೃತ್ತ ಶಿಕ್ಷಕ ಆರ್.ಬಿ.ನಡುವಿನಮನಿ ಮಾತನಾಡಿ, ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದು. ಸಮಾಜದಿಂದ ಪಡೆದ ಒಂದಿಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ವೇಳೆ ನಿವೃತ್ತ ಶಿಕ್ಷಕರಾದ ಬಿ.ಎ.ದೇಶಪಾಂಡೆ, ಎಂ.ಡಿ.ಪತ್ರಿ, ಕೆ.ಜಿ.ಉಮದಿ, ಬಿ.ಎಸ್.ಬಲತಿ, ಆರ್.ಜಿ.ನಾವಿ, ಬಿ.ಎಸ್.ರಾಮತೀರ್ಥ, ಎಂ.ಆರ್.ವಾವಳ, ಬಿ.ಎಸ್.ಮಿಳ್ಳಿ ಇತರರು ಉಪಸ್ಥಿತರಿದ್ದರು.