ಸಾರಾಂಶ
-ಹರಿಹರಪುರ ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಮತ । ಕೆರೆಮನೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಧಾರ್ಮಿಕ ಸಭೆ, ದೀಪೋತ್ಸವ
------ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಮನುಷ್ಯನಾಗಿ ಹುಟ್ಟಬೇಕಾದರೆ ಪೂರ್ವಜನ್ಮದಲ್ಲಿ ಪುಣ್ಯ ಸಂಪಾದನೆ ಮಾಡಿರಬೇಕು ಎಂದು ಹರಿಹರಪುರ ಮಠದ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿಗಳು ತಿಳಿಸಿದರು.
ಅವರು ಕಾನೂರು ಗ್ರಾಮದ ಕೆರೆಮನೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 42 ನೇ ವರ್ಷದ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನ ಮಾಡಿದರು. ಈ ಜಗತ್ತಿನ ಜೀವ ಸಂಕುಲದಲ್ಲಿ ಮನುಷ್ಯನಿಗೆ ಮಾತ್ರ ಉನ್ನತ ಸ್ಥಾನವಿದೆ. ಮನುಷ್ಯ ಜನ್ಮವನ್ನು ಹೇಗೆ ಸಾರ್ಥಕ ಪಡಿಸಿಕೊಳ್ಳಬಹುದು ಎಂಬ ವಿವೇಕವಿದೆ. ಮನುಷ್ಯನಾದವ ಒಳ್ಳೆಯ ಬದುಕು ಬಾಳಬೇಕು. ಮನುಷ್ಯನಿಗೆ ಭಗವಂತನು ಅದ್ಭುತ ವಿವೇಕ, ಸ್ವಾತಂತ್ರ ನೀಡಿದ್ದಾನೆ. ಪ್ರಕೃತಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ವಿವೇಚನೆ ಮನುಷ್ಯನಿಗೆ ಇದೆ. ನಮ್ಮಲ್ಲಿರುವ ದೈವಿಕ, ಮಾನಸಿಕ, ಭೌದ್ಧಿಕ ಶಕ್ತಿಯನ್ನು ಆತ್ಮಶಕ್ತಿಯ ವಿಕಾಸಕ್ಕಾಗಿ ಬಳಸುವುದನ್ನು ಕಲಿತುಕೊಳ್ಳಬೇಕು ಎಂದರು.ಮನುಷ್ಯನ ಮನಸ್ಸು ಸರಿಯಾಗಿ ಇಲ್ಲದಿದ್ದರೆ ಕಾಯಿಲೆ ಬರುತ್ತದೆ. ಪ್ರಕೃತಿಯ ವಿರುದ್ಧ ನಡೆದುಕೊಳ್ಳಬಾರದು. ಇಂದ್ರೀಯಗಳನ್ನು ನಿಗ್ರಹ ಮಾಡಿಕೊಳ್ಳಬೇಕು. ಆತ್ಮಕ್ಕೆ ಹುಟ್ಟು, ಸಾವು ಇರುವುದಿಲ್ಲ. ಇಡೀ ಪ್ರಪಂಚದಲ್ಲಿ ಇರುವುದು ಒಬ್ಬನೇ ಪರಮಾತ್ಮ. ದೈಹಿಕ ಶಕ್ತಿ, ಮಾನಸಿಕ ಶಕ್ತಿ, ಬುದ್ಧಿ ಶಕ್ತಿಗೆ ಪೂರಕವಾಗಿ ಆತ್ಮಶಕ್ತಿ ಇರುತ್ತದೆ. ಪ್ರತಿಯೊಬ್ಬರೂ ಆತ್ಮಶಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಘುನಾಥ ಶಾಸ್ತಿ ಮಾತನಾಡಿ, 10 ರಂದು ಹರಿಹರಪುರ ಮಠದಲ್ಲಿ ವೈಕುಂಠ ಏಕಾದಶಿ ಆರಾಧನೆ ನಡೆಯಲಿದೆ. ಏಕಾದಶಿ ಆರಾಧನೆಯು ಪ್ರತಿ ವರ್ಷ ಒಂದು ಬಾರಿ ಮಾತ್ರ ನಡೆಯಲಿದೆ. ಎಲ್ಲಾ ಭಕ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.ಸನಾತನ ಹಿಂದೂ ಪರಿಷತ್ ನ ಮುಖ್ಯಸ್ಥ ಅರವಿಂದ ಸೋಮಯಾಜಿ ಮಾತನಾಡಿ, ಕಳೆದ 42 ವರ್ಷದಿಂದಲೂ ಕೆರೆಮನೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜನವರಿ 8 ರಂದು ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಹರಿಹರಪುರ ಸ್ವಯಂ ಪ್ರಕಾಶ ಸರಸ್ವತಿ ಮಹಾ ಸ್ವಾಮೀಜಿಗಳು ಜಾತಿ, ಧರ್ಮ ಬೇದಭಾವವಿಲ್ಲದೆ ಎಲ್ಲಾ ಕಡೆ ಧರ್ಮವನ್ನು ಪ್ರಸರಿಸುತ್ತಿದ್ದಾರೆ. ಈಗ ಜನರಿಗೆ ಹಣದ ಕೊರತೆ ಇಲ್ಲ. ಆದರೆ, ಸಮಯದ ಕೊರತೆ ಕಾಣುತ್ತಿದೆ. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಗುರುಗಳ ದೃಷ್ಠಿ ಇದ್ದಲ್ಲಿ ಈ ಭಾಗದ ಜನರಿಗೆ ಒಳಿತಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷರು, ಸದಸ್ಯರು, ನೂರಾರು ಭಕ್ತರು ಪಾಲ್ಗೊಂಡಿದ್ದರು.ಧಾರ್ಮಿಕ ಕಾರ್ಯಕ್ರಮ: ಕೆರೆಮನೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 8 ಗಂಟೆಗೆ ಗಣಪತಿ ಪೂಜೆ, ಗಣಪತಿ ಹೋಮ, ಮೂಡು ಗಣಪತಿ, ಕಲಾ ಹೋಮ, ಕಲಶಾಭಿಷೇಕ ಪೂಜೆ ನಡೆಯಿತು.ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಾಳಿಗ ಪುರತ್ತಮ್ಮ ದೇವಿಗೆ ಸಹಸ್ರನಾಮ ಕುಂಕುಮಾರ್ಚನೆ, ಶ್ರೀ ಚೌಡೇಶ್ವರಿ ದೇವರಲ್ಲಿ ಸಪ್ತಸತಿ ಪಾರಾಯಣ, ಶ್ರೀ ನಾಗದೇವರಿಗೆ ಪವಮಾನಾಭಿಷೇಕ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.ಮದ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಸಿದ್ದಿ ವಿನಾಯಕ ಚಂಡೆ ಬಳಗದ ಸೇವೆಯೊಂದಿಗೆ ಕಾನೂರಿನ ಸಿದ್ದಿ ವಿನಾಯಕ ದೇವಸ್ಥಾನದಿಂದ ಜ್ಯೋತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾರಾಧನೆ, ತಣ್ಣಿರಪ್ಪ, ದೇವಿ ಮೆರವಣಿಗೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.