ಸಾರಾಂಶ
ಆ. 9ರಂದು ಕನ್ನಡಪ್ರಭ ಪ್ರಕಟಿಸಿದ ವರದಿಗೆ ಫಲಶೃತಿ
ಕನ್ನಡಪ್ರಭ ವಾರ್ತೆ, ಬೀರೂರು.ಈ ಹಿಂದೆ ಸರಾಗವಾಗಿ ನೀರು ಹರಿಯುತ್ತಿದ್ದ ಚಾನಲ್‌ಗೆ ಹೆದ್ದಾರಿಯ ಅವೈಜ್ಞಾನಿಕ, ಮುಂದಾಲೋಚನೆ ಇಲ್ಲದ ಕಾಮಗಾರಿ ಪರಿಣಾಮ ಅವ್ಯವಸ್ಥೆ ಉಂಟಾಗಿ, ಕೃಷಿಕರು, ವಾಹನ ಸವಾರರು ಹಾಗೂ ಬಡಾವಣೆ ನೂರಾರು ಜನರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ನೀವೆ ಜವಾಬ್ದಾರಾಗುತ್ತೀರಿ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸಂಸದ ಶ್ರೇಯಸ್ ಪಟೇಲ್ ಖಡಕ್ ಎಚ್ಚರಿಕೆ ನೀಡಿದರು.
ಆ.9 ರಂದು "ಗಾಳಿಹಳ್ಳಿ ಕೆರೆ ಕೋಡಿ: ಬಡಾವಣೆ, ತೋಟ ಜಲಾವೃತ " ಎನ್ನುವ ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿದ್ದ ಹಿನ್ನಲೆಯಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಕೆ.ಎಸ್.ಆನಂದ್ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಮಂಗಳವಾರ ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಗೆ ಮದಗದ ಕೆರೆಯ ಸರಣಿ ಕೆರೆಯಲ್ಲೊಂದಾದ ಗಾಳಿಹಳ್ಳಿ ಕೆರೆ ತುಂಬಿ ಕೋಡಿ ಬಿದ್ದು, ಬೀರೂರು -ಅಜ್ಜಂಪುರ ರಸ್ತೆ ತಿರುವಿನ ಯಗಟಿ ರಸ್ತೆ ಮೇಲ್ಸೇತುವೆಯ ಕೆಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಡಿ ಬಿದ್ದ ನೀರು ರಹಿಂ ಸಾಬ್ ಬಡಾವಣೆ ಹಾಗೂ ಸುತ್ತಮುತ್ತಲ ಕೃಷಿ ಜಮೀನು ಸೇರಿದಂತೆ ಸ್ಥಳದಲ್ಲಿ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯಾಗಿತ್ತು. ರಾಜ್ಯ ಹೆದ್ದಾರಿಯಲ್ಲೇ ಗುಂಡಿ ಬಿದ್ದ ಹಿನ್ನಲೆಯಲ್ಲಿ ವಾಹನ ಸವಾರರು ಎದ್ದು ಬಿದ್ದು ಅನಾಹುತಗಳು ಸಂಭವಿಸಿದ್ದವು.
ಸ್ಥಳ ಪರಿಶೀಲನೆ ನಡೆಸಿದ ಸಂಸದ ಶ್ರೇಯಸ್ ಪಟೇಲ್, ರಾ. ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಹಿಂದೆ ನೀರು ಸರಾಗವಾಗಿ ಹರಿಯುತ್ತಿದ್ದ ಚಾನಲ್ ಬಳಿ ಮುಂದಾಲೋಚನೆ ಇಲ್ಲದೆ ಅವೈಜ್ಞಾನಿಕ ಕಾಮಗಾರಿ ನಡೆಸಿ ಬಡಾವಣೆ ನೂರಾರು ಜನರಿಗೆ ತೊಂದರೆಯಾಗಿದೆ. ಪರಿಶೀಲನೆ ವೇಳೆ ಸ್ಥಳಕ್ಕೆ ಬರಬೇಕಿದ್ದ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಎಂದ ಅವರು ಈ ಸಂಬಂಧ ಜಿಲ್ಲಾಧಿಕಾರಗಳು ಉತ್ತರಿಸಲು ಸಚಿವರ ಗಮನಕ್ಕೆ ತರಲು ಸೂಚಿಸಿದರು.ಶಾಸಕ ಕೆ.ಎಸ್.ಆನಂದ್ ಕ್ಷೇತ್ರದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದು ಮತ್ತು ಈ ನೆರೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇಕೆ. ಅಧಿಕಾರಿಗಳು ತರಾತುರಿಯಲ್ಲಿ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ನಾನು ಸಹಿಸಲ್ಲ. ಲಕ್ಷಾಂತರ ಕೋಟಿ ಕಾಮಗಾರಿ ಮಾಡುವ ಪ್ರಾಧಿಕಾರದ ಅಧಿಕಾರಿಗಳು ಸಣ್ಣಪುಟ್ಟ ಕೆಲಸಗಳಲ್ಲಿ ಎಡವುದನ್ನು ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಪರಿಶೀಲಿಸಬೇಕು ಎಂದರು.ಸಂಸದ ಶ್ರೇಯಸ್ ಪಟೇಲ್ ಮಾರ್ಗದರ್ಶನದಂತೆ ರಹೀಂ ಬಡಾವಣೆಯಿಂದ ಈ ಹಿಂದೆ ಇದ್ದ ಕಾಲುವೆಯನ್ನು ಇನ್ನು ಒಂದು ವಾರದೊಳಗೆ ಯಥಾ ಸ್ಥಿತಿಯಾಗಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಉತ್ತರಿಸಿದ ತುಮಕೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅನುಪ್ ಶರ್ಮಾ, ನಮಗೆ ಈ ಹಿಂದೆ ಇದ್ದ ನಕ್ಷೆಯಂತೆ ಹೆದ್ದಾರಿ ಕಾಮಗಾರಿ ಮಾಡಿದ್ದೇವೆ. ಈ ರೀತಿ ನೆರೆ ಬರುವುದು ತಿಳಿದಿರಲಿಲ್ಲ. ಸಂಸದರು ಹೇಳಿ ದಂತೆ ಇಂಜಿನಿಯರ್ ಜೊತೆ ಚರ್ಚಿಸಿ ರಸ್ತೆ ಮೇಲೆ ಹರಿಯದಂತೆ ಶಾಶ್ವತ ಕಾಮಗಾರಿ ಮಾಡಲಾಗುವುದು. ಕಾಮಗಾರಿ ನಡೆಸಲು ಬೇಕಾದ ಜಾಗ, ಅವಶ್ಯಕತೆಯನ್ನು ಕಂದಾಯ ಇಲಾಖೆ ನೀಡಿದರೆ ಒಂದೂವರೆ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನಿಡಿದರು.ಯೋಜನೆ ಪೂರ್ಣಕ್ಕೆ ಬದ್ಧ : ಈಗಾಗಲೇ ತರೀಕೆರೆ-ಕಡೂರು ಕ್ಷೇತ್ರದಲ್ಲಿ ಆರಂಭವಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಂಸತ್ ನಲ್ಲು ಚರ್ಚಿಸಿದ್ದು, ಅಡಕೆ, ತೆಂಗು, ಕೊಬ್ಬರಿ ಬೆಳೆ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ. ಬೀರೂರಿನ ರೈಲ್ವೆ ನಿಲ್ದಾಣದ ಶುಚಿತ್ವ, ಭಾಗವತ್ ನಗರಕ್ಕೆ ಪ್ರತ್ಯೇಕ ಫ್ಲೈಓವರ್ ಬಗ್ಗೆ ಶಾಸಕ ಆನಂದ್ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಯುವಕರ ನಿರುದ್ಯೋಗ ಮತ್ತಿತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಯೋಜನೆಇದೆ ಎಂದು ಪತ್ರಿಕೆಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಮೇಘನ, ಮುಖ್ಯ ಇಂಜಿನಿಯರ್ ರಾಮಲಿಂಗ, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಸಮಿವುಲ್ಲಾ, ಕಂದಾಯ ಅಧಿಕಾರಿ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ನವೀನ್, ಹುಲ್ಲೇಹಳ್ಳಿ ಪಿಡಿಒ ಮಂಜುನಾಥ್ ಸೇರಿದಂತೆ ಮತ್ತಿತರಿದ್ದರು. 27 ಬೀರೂರು 2ಬೀರೂರಿನ ಅಜ್ಜಂಪುರ ರಸ್ತೆಯಲ್ಲಿ ಗಾಳಿಹಳ್ಳಿ ಕೆರೆಕೋಡಿ ಬಿದ್ದು ರಾ.ಹೆ. ಸಂಚಾರ ಅವ್ಯವಸ್ಥೆ ಹಿನ್ನಲೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಪೂರ್ಣಿಮ, ವಿಶೇಷ ಭೂಸ್ವಾಧೀನಾಧಿಕಾರಿ ಮೇಘನ, ಮುಖ್ಯ ಇಂಜಿನಿಯರ್ ರಾಮಲಿಂಗ ಇದ್ದರು.