ನಿಮ್ಮ ಸೇವೆಗೆ ಒಂದು ಅವಕಾಶ ಮಾಡಿಕೊಡಿ: ಶ್ರೇಯಸ್‌ ಪಟೇಲ್‌

| Published : Apr 18 2024, 02:17 AM IST

ಸಾರಾಂಶ

ಈ ಬಾರಿ ನನಗೆ ಮತ ಚಲಾಯಿಸುವ ಮೂಲಕ ನಿಮ್ಮ ಸೇವೆ ಮಾಡಲು ನನಗೂ ಒಂದು ಅವಕಾಶ ಮಾಡಿಕೊಡಿ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ತಾಲೂಕಿನ ಮತದಾರರಲ್ಲಿ ಮನವಿ ಮಾಡಿದರು. ಆಲೂರು ತಾಲೂಕಿನ ಪಂಚಾಯತಿ ಮಟ್ಟದ ಪ್ರತಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.

ಪ್ರಚಾರ । ಆಲೂರು ತಾಲೂಕಿನಲ್ಲಿ ಮತಯಾಚನೆ । ವಿವಿಧ ದೇವಾಲಯಗಳಿಗೆ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಆಲೂರು

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ನನಗೆ ಮತ ಚಲಾಯಿಸುವ ಮೂಲಕ ನಿಮ್ಮ ಸೇವೆ ಮಾಡಲು ನನಗೂ ಒಂದು ಅವಕಾಶ ಮಾಡಿಕೊಡಿ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ತಾಲೂಕಿನ ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತಾಲೂಕಿನ ಪಂಚಾಯತಿ ಮಟ್ಟದ ಪ್ರತಿ ಗ್ರಾಮಗಳಾದ ಹಂಚೂರು, ಗಂಜಿಗೆರೆ, ಮಗ್ಗೆ, ಕೆಂಚಮ್ಮನ ಹೊಸಕೋಟೆ, ಅಬ್ಬನ, ಪಾಳ್ಯ, ಮಡಬಲು, ತಾಳೂರು, ಕಣತೂರು ಹುಣಸವಳ್ಳಿ ಕದಾಳು, ದೊಡ್ಡಕಣಗಾಲು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಸ್ಥಳಗಳಲ್ಲಿ ಭೇಟಿ ನೀಡಿ ಮತಯಾಚಿಸಿದರು. ವಿವಿಧ ಗ್ರಾಮಗಳ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ‘ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಆಲೂರು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮ್ಮ ಪಕ್ಷದ ಮುಖಂಡರು ಹಾಗೂ ನಾಯಕರು ಕಾರ್ಯಕರ್ತರೊಡನೆ ಮತಯಾಚನೆ ಮಾಡುತ್ತಿದ್ದೇವೆ. ಈ ಭಾಗದ ಜನರಿಂದ ಅಭೂತಪೂರ್ವ ಬೆಂಬಲಸಿಕ್ಕಿದ್ದು ಜನರೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದರು.

‘ಈ ಭಾಗದ ಜನರು ಕೂಡ ಕಾಂಗ್ರೆಸ್ ಪಕ್ಷದ ಆಡಳಿತ ಹಾಗೂ ಗ್ಯಾರಂಟಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ನಮಗೆ ಉತ್ತಮ ಬೆಂಬಲವನ್ನು ನೀಡುತ್ತಿದ್ದಾರೆ. ಜನರು ಜೆಡಿಎಸ್ ಪಕ್ಷದ ಅಪ್ಪ ಮಕ್ಕಳ ಕುಟುಂಬ ರಾಜಕಾರಣದ ದಬ್ಬಾಳಿಕೆ ಅಹಂಕಾರವನ್ನು ನೋಡಿ ಬದಲಾವಣೆ ಬಯಸುತ್ತಿದ್ದಾರೆ. ಮುಂದೆ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಆಲೂರು, ಸಕಲೇಶಪುರ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ. ಆನೆ ಹಾವಳಿ, ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡದಿರುವುದು, ಎತ್ತಿನಹೊಳೆ ಯೋಜನೆಯಲ್ಲಿ ಜಮೀನು, ಮನೆ, ಕಳೆದುಕೊಂಡಿರುವುದು ಬೆಳೆಹಾನಿ, ಹಲವಾರು ಸಮಸ್ಯೆಯಿಂದ ಈ ಭಾಗದ ರೈತರು ನೆಮ್ಮದಿಯ ಜೀವನವವನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಾರಿ ನಿಮ್ಮ ಸೇವೆ ಮಾಡಲು, ಇಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಅವಕಾಶಮಾಡಿ ಕೊಡಿ’ ಎಂದು ಮನವಿ ಮಾಡಿದರು.

‘ನನ್ನನ್ನು ಈ ಕ್ಷೇತ್ರದ ಜನರ ಗೆಲ್ಲಿಸಿದ್ದೆ ಆದಲ್ಲಿ ಇಲ್ಲಿಯ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ನಾನು ಗೆಲ್ಲುವುದು ಶತಸಿದ್ಧ. ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿ ಇದ್ದವರು ಈ ಭಾಗದ ಕಡೆ ತಿರುಗಿ ನೋಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ಹಾಗಾಗಿ ಈ ಬಾರಿ ಜನ ಬದಲಾವಣೆಯನ್ನು ಬಯಸಿದ್ದು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಆಲೂರು, ಸಕಲೇಶಪುರ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ನಾವು ಗೆದ್ದೇ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಅನೇಕ ಗ್ರಾಮ ಪಂಚಾಯಿತಿ ಸದಸ್ಯರು ಜೆಡಿಎಸ್, ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್, ಹೆಮ್ಮಿಗೆ ಮೋಹನ್ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್‌.ಎಸ್‌.ಶಿವಮೂರ್ತಿ, ಶಾಂತ ಕೃಷ್ಣ, ಟೀಕ್ ರಾಜು, ರಂಗೇಗೌಡ, ಶಾಂತಪ್ಪ, ಶ್ರೀಕಾಂತ್, ಅಜ್ಜೇನಳ್ಳಿ ಲೋಕೇಶ್, ಲೋಕೇಶ್ ಮತಯಾಚನೆಯಲ್ಲಿ ಭಾಗಿಯಾದರು.

ಆಲೂರು ತಾಲೂಕಿನ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್ ಮತಯಾಚಿಸಿದರು.