ಸಾರಾಂಶ
ಹನೂರು ಪಟ್ಟಣದ ರೈತ ಕಿಸಾನ್ ಸಂಘ ರಾಮಚಂದ್ರಾಪುರ ಮಠದ ರಾಘವೇಂದ್ರ ಭಾರತಿ ಮಹಾಸ್ವಾಮಿಗಳಿಗೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕು ವ್ಯಾಪ್ತಿಯಲ್ಲಿ ನಶಿಸಿ ಹೋಗುತ್ತಿರುವ ದೇಸಿ ಗೋ ತಳಿಗಳನ್ನು ಸಂರಕ್ಷಣೆ ಮಾಡಲು ತಾವು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳಿಗೆ ಕಿಸಾನ್ ಸಂಘದ ರೈತ ಮುಖಂಡರು ಮನವಿ ಮಾಡಿದರು.ಭಾರತೀಯ ಕಿಸಾನ್ ಸಂಘದ ಬೋಸ್ಕೋ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ 2018ರ ಸಾಲಿನಲ್ಲಿ ಸರ್ವೆ ಮಾಡಿದಾಗ 1,20,000 ದೇಸಿ ಗೋ ತಳಿಗಳಿದ್ದವು. ಆದರೆ ಈಗಿನ ಸರ್ಕಾರದ ಸರ್ವೆ ಪ್ರಕಾರ ಕೇವಲ 60 ಸಾವಿರಕ್ಕೆ ಇಳಿಕೆಯಾಗಿದ್ದು ಮುಂದಿನ ದಿನಗಳಲ್ಲಿ ದೇಸಿ ತಳಿಗಳು ನಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿನ ಗ್ರಾಮಗಳು ಕಾಡಂಚಿನ ಗ್ರಾಮಗಳಾಗಿದ್ದು ಗೋವುಗಳು ತಲ ತಲಾಂತರದಿಂದ ಮೇವು ಮೇಯಲು ಅರಣ್ಯವನ್ನು ಅವಲಂಬಿಸಿದೆ. ಈ ಹಿಂದೆ ಅರಣ್ಯದ ಮಧ್ಯಭಾಗದಲ್ಲಿ ಗೋವುಗಳ ದೊಡ್ಡಿಗಳನ್ನು ಹಾಕಿ ಮೇಯಿಸಲಾಗುತ್ತಿತ್ತು.
ಈಗಿನ ಸರ್ಕಾರಗಳು ಮಲೆ ಮಹದೇಶ್ವರ ವನ್ಯಜೀವಿಧಾಮ ಕಾವೇರಿ ವನ್ಯಜೀವಿಧಾಮ ಎರಡು ಅರಣ್ಯ ಪ್ರದೇಶಗಳು ಸುಮಾರು 2 ಸಾವಿರ ಚ.ಕಿ.ಮೀ ಇದ್ದು, ಕೇವಲ ನಾಲ್ಕು ಹುಲಿಗಳಿಗೆ ಸೀಮಿತಪಡಿಸಿ ದೇಸಿ ಗೋತಳಿಗಳಿಗೆ ನಿರ್ಬಂಧ ಹೇರಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತಾವುಗಳು ಸರ್ಕಾರಕ್ಕೆ ಗಮನ ಸೆಳೆದು ಹುಲಿ ಸಂರಕ್ಷಿತ ಅರಣ್ಯವನ್ನು ಕೈಬಿಡಿಸಿ ದೇಸಿಯ ಗೋ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲು ತಾವು ಮನವರಿಕೆ ಮಾಡಿಕೊಡಬೇಕೆಂದು ಮನವಿ ಮಾಡಿದರು.ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಮಾತನಾಡಿ, ಹನೂರು ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು ಹವಾಮಾನ ವೈಪರೀತ್ಯದಿಂದ ಕಾಲಕಾಲಕ್ಕೆ ಮಳೆಯಾಗದೆ ಇಲ್ಲಿನ ರೈತಾಪಿ ವರ್ಗ ಕೃಷಿಯಲ್ಲಿ ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಹನೂರು ತಾಲೂಕಿನಾದ್ಯಂತ ಇರುವ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಒಂದು ಜಲಾಶಯಕ್ಕೆ ಪೈಪ್ ಲೈನ್ ಮಾಡಿದ್ದು ಇದುವರೆಗೂ ನೀರು ಹರಿಸಿಲ್ಲ. ಇನ್ನುಳಿದ ರಾಮನಗುಡ್ಡ ಹುಬ್ಬೆಹುಣಸೆ, ಮಣಗಳ್ಳಿಕೆರೆ, ಹಲಗಾಪುರ ಕೆರೆ, ಉಡುತೊರೆ ಹಳ್ಳ ಜಲಾಶಯ, ಕೀರೆ ಪಾತಿ ಕೆರೆ, ಹೂಗ್ಯಂ ಜಲಾಶಯ ಸೇರಿದಂತೆ ಮುಂತಾದ ಕೆರೆಗಳಿಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು. ಈ ವೇಳೆ ಕಿಸಾನ್ ಸಂಘದ ಹಲವು ರೈತ ಮುಖಂಡರು ಹಾಜರಿದ್ದರು.