ಕುಷ್ಟಗಿ: ಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಯಲ್ಲಿನ ಸಂಪತ್ತು ಉಳಿಸಿ ರಕ್ಷಿಸಲು ಮುಂದಾಗಿ ಒಗ್ಗಟ್ಟಾಗಿ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್ ಮಂಜುನಾಥ ಹೇಳಿದರು.
ಸಮೀಪದ ನಿಡಶೇಸಿ ಕೆರೆಯ ಅಂಗಳದಲ್ಲಿ ಪೊಲೀಸ್ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ವಕೀಲರ ಸಂಘ, ತಾಪಂ,ಪುರಸಭೆ, ಸಣ್ಣ ನೀರಾವರಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇವಲ ಅಧಿಕಾರಿಗಳಿಂದ ಕೆರೆಯ ರಕ್ಷಣೆ ಮತ್ತು ಅಭಿವೃದ್ಧಿ ಕೆಲಸವಾಗುವದಿಲ್ಲ, ಕೆರೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ಸಹಭಾಗೀತ್ವ ಅತಿ ಮುಖ್ಯವಾಗಿದೆ ಎಂದ ಅವರು, ಇಲ್ಲಿನ ಜನರು ಕೆರೆ ದಡದಲ್ಲಿ ಆಗುವ ಮಾಲಿನ್ಯ ತಡೆಗಟ್ಟಬೇಕು ಬಯಲು ಬಹಿರ್ದೇಸೆ,ಬಟ್ಟೆ ತೊಳೆಯುವದು, ಎತ್ತು ತೊಳೆಯುವುದು,ವಾಹನ ತೊಳೆಯುವದು ಮಾಡಬಾರದು ಎಂದರು.
ಹೆಚ್ಚುವರಿ ನ್ಯಾಯಾಧೀಶ ಮಹಾಂತೇಶ ಚೌವಲಗಿ ಮಾತನಾಡಿ, ನಮ್ಮ ದೈನಂದಿನ ಬದುಕಿಗೆ ಗಾಳಿ, ಬೆಳಕು, ನೀರು ಆಹಾರ ಅತ್ಯವಶ್ಯಕವಾಗಿದ್ದು, ಇವುಗಳನ್ನು ಯಾವುದೇ ಕಾರಣಕ್ಕೂ ಹಾಳು ಮಾಡಬಾರದು ಸಮರ್ಪಕವಾಗಿ ಬಳಸಿಕೊಳ್ಳಬೇಕು ಇಂದಿನ ದಿನಗಳಲ್ಲಿ ನೀರು ಬಹಳಷ್ಟು ಮೌಲ್ಯಯುತವಾಗಿದ್ದು ನೀರನ್ನು ಬಳಸುವ ವಿಧಾನ ತಿಳಿದುಕೊಳ್ಳಬೇಕು ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಟ ಸೃಷ್ಟಿಯಾಗಿ ಯುದ್ಧ ನಡೆಯಬಹುದು ಆದರಿಂದ ನೀರಿನ ಮೌಲ್ಯ ತಿಳಿದುಕೊಳ್ಳಬೇಕಿದೆ ಎಂದರು.ಕೆರೆಯಲ್ಲಿನ ಹೂಳೆತ್ತುವ ಮೂಲಕ ನೀರನ್ನು ಸಂಗ್ರಹಣೆ ಮಾಡಿಕೊಳ್ಳಬೇಕು ಕೆರೆಯಲ್ಲಿ ನೀರು ಸಂಗ್ರಹಣೆಯಾದಲ್ಲಿ ಕೆರೆಯ ಸುತ್ತಲಿನ ನೂರಾರು ಎಕರೆಯ ಭೂಮಿಯಲ್ಲಿ ಅಂತರ್ಜಲ ಹೆಚ್ಜಲಿದೆ ಎಂದ ಅವರು, ರೈತರು ಜಮೀನುಗಳಲ್ಲಿ ಒಡ್ದು ನಿರ್ಮಾಣ, ಕೃಷಿ ನಿರ್ಮಾಣ ಮಾಡುವ ಮೂಲಕ ಮಳೆಯ ನೀರು ಸಂಗ್ರಹಣೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಒಂದು ಹನಿ ನೀರು ಅಮೃತಕ್ಕೆ ಸಮಾನವಾಗಿದೆ, ಕೆರೆ ಅಭಿವೃದ್ಧಿಯಾದಲ್ಲಿ ಅಂತರ್ಜಲ ಹೆಚ್ಚಳಲಿದೆ ಎಲ್ಲ ಜಮೀನಿನಲ್ಲಿ ಒಳ್ಳೆ ಬೆಳೆ ಬೆಳೆಯಬಹುದಾಗಿದ್ದು ರೈತರು ಕೆರೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಿಪಿಐ ವಿಶ್ವನಾಥ ಹಿರೇಗೌಡರ ಮಾತನಾಡಿ, ಕೆರೆಯ ನೈಸರ್ಗಿಕ ಸಂಪತ್ತನ್ನು ಜವಾಬ್ದಾರಿ ಅರಿತುಕೊಂಡು ಅರ್ಥಪೂರ್ಣವಾಗಿ ಬಳಸಿಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ, ಗ್ರೇಡ್ 2 ತಹಸೀಲ್ದಾರ್ ರಜನಿಕಾಂತ ಕೆಂಗಾರಿ, ಸಿಪಿಐ ವಿಶ್ವನಾಥ್ ಹಿರೇಗೌಡರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ, ಸಣ್ಣ ನೀರಾವರಿ ಇಲಾಖೆ ಎಇಇ ದೇವೆಂದ್ರಪ್ಪ ಇಟ್ಟಂಗಿ, ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್, ಅಪರ ಸರ್ಕಾರಿ ವಕೀಲ ಪರಸಪ್ಪ ಎನ್. ಗುಜಮಾಗಡಿ, ಪ್ರಾದೇಶಿಕ ವಲಯ ಆರಣ್ಯ ಅಧಿಕಾರಿ ಶಿವರಾಜ ಮೇಟಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಹನುಮಂತಪ್ಪ, ಪಿಎಸೈ ಹನಮಂತಪ್ಪ ತಳವಾರ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ್ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿ, ಗ್ರಾಮಸ್ಥರು, ಇಲಾಖೆಗಳ ಸಿಬ್ಬಂದಿ ಇದ್ದರು.ಶಿಕ್ಷಕ ನಟರಾಜ ಸೋನಾರ ನಿರೂಪಿಸಿದರು, ಕೊರಡಕೇರಾ ಗ್ರಾಪಂ ಪಿಡಿಓ ಶ್ರೀಶೈಲ ಪೋಲೆಸಿ ವಂದಿಸಿದರು.
ಉದ್ಯಾನವನದಲ್ಲಿ ಸಸಿ ನೆಟ್ಟರು:ನಿಡಶೇಶಿ ಕೆರೆಯ ಅಂಗಳದಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಿದ ನ್ಯಾಯಾಧೀಶರು ಸಾರ್ವಜನಿಕ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಅಧಿಕಾರಿಗಳಿಗೆ ಉದ್ಯಾನವನದ ಅಭಿವೃದ್ಧಿಗೆ ಹಾಗೂ ಕೆರೆಯ ಅಭಿವೃದ್ದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.