ಸಾರಾಂಶ
ಕನ್ನಡಪ್ರಭ ವಾರ್ತೆ ಮುಳಬಾಗಿಲು ನಗರದ ವಿವಿಧ ಸರ್ಕಾರಿ ಕಚೇರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳೊಂದಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಕೊರತೆ ಮತ್ತು ಶೌಚಾಲಯಗಳ ಸ್ವಚ್ಛತೆ ಇಲ್ಲದೆ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಮಳಿಗೆಗಳಿಗೆ ಪರವಾನಿಗೆ ಇಲ್ಲದೆ ನಡೆಸುತ್ತಿರುವುದನ್ನು ಪರಿಶೀಲಿಸಿ ಯಾಕೆ ಪರವಾನಿಗೆ ಮಾಡಿಸಿಲ್ಲ ಪ್ರಶ್ನೆಸಿದರು. ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಅಂಗಡಿಗಳಿಗೆ ಪರವಾನಿಗೆ ಮಾಡಿಕೊಡಬೇಕೆಂದು ಸೂಚಿಸಿದರು. ಬಸ್ ನಿಲ್ದಾಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅವಧಿ ಮುಗಿದಿರುವ ಹಾಲಿನ ಉತ್ಪನ್ನಗಳು ಕಂಡುಬಂದಿದ್ದರಿಂದ ಪಾರ್ಲರ್ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿದ್ದೀರಿ. ಕೂಡಲೇ ಅವಧಿ ಮುಗಿದಿರುವ ಹಾಲಿನ ಉತ್ಪನ್ನಗಳನ್ನು ತಿಪ್ಪೆಗೆ ಎಸೆಯಬೇಕೆಂದು ಸೂಚಿಸಿದರು. ಕಂದಾಯ ವಿಭಾಗಕ್ಕೆ ಭೇಟಿ ನೀಡಿ ಎ ಖಾತೆ, ಬಿ ಖಾತೆ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ನೊಂದಣಿ ಆಗಿವೆ ಎಂದು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ದಾಖಲೆ ಪುಸ್ತಕ ನಿರ್ವಹಣೆ ಮಾಡದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿ ಕೂಡಲೇ ನಮೂದು ಪುಸ್ತಕ ತೆರೆಯಬೇಕೆಂದು ಆದೇಶಿಸಿದರು. ಕಂದಾಯ ಇಲಾಖೆ ವಿಭಾಗದಲ್ಲಿ ೫ ಜನ ಪೌರಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಕಂಡು ಕಾನೂನು ಬಾಹೀರವಾಗಿ ಪೌರಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಮುಂದೆ ಈ ರೀತಿ ನಡೆದುಕೊಳ್ಳಬಾರದೆಂದು ಎಚ್ಚರಿಸಿದರು. ಕಂದಾಯ ಅಧಿಕಾರಿ ತ್ಯಾಗರಾಜ್ ಉತ್ತರಿಸಿ, ನಾನು ಬಂದು ಎರಡು ತಿಂಗಳಾಗಿದೆ ನನಗೆ ಏನು ಗೊತ್ತಿಲ್ಲ ಎಂದಾಗ ತ್ಯಾಗರಾಜ ನೀನು ತ್ಯಾಗ ಮಾಡಿಕೊಂಡೇ ಇದ್ದರೆ ಸಾರ್ವಜನಿಕರ ಕೆಲಸ ಮಾಡುವರು ಯಾರು ಎಂದು ಪ್ರಶ್ನಿಸಿದರು.
ಹಿರಿಯ ಆರೋಗ್ಯಾಧಿಕಾರಿ ಪ್ರತಿಭಾ ಮೊಬೈಲ್ ಪರಿಶೀಲಿಸಿದಾಗ ಪೋನ್ ಪೇಗೆ ₹೨೫ ಸಾವಿರ ಬಂದಿರುವುದನ್ನು ಕಂಡು ಯಾರು ನಿಮಗೆ ಹಣವನ್ನು ಪೋನ್ ಪೇ ಮಾಡಿದ್ದಾರೆ ಇಲಾಖೆ ಅನುಮತಿ ಇದೆಯೇ ಎಂದು ತರಾಟೆಗೆ ತೆಗೆದುಕೊಂಡು ಎರಡು ಹಾಜರಾತಿ ಪುಸ್ತಕಗಳನ್ನು ಯಾವ ಕಾರಣಕ್ಕೆ ಇಟ್ಟಿದ್ದೀರಿ ಪೌರಾಯುಕ್ತರ ಆದೇಶ ಇದೆಯೇ ಎಂದು ಪ್ರಶ್ನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಿರಿಯ ಆರೋಗ್ಯ ನಿರೀಕ್ಷಕ ಶಿವಾರೆಡ್ಡಿ ೧೮ ವರ್ಷದಿಂದ ಒಂದೇ ಕಡೆ ಇರುವುದನ್ನು ತಿಳಿದುಕೊಂಡು ಸುಮೊಟೊ ಕೇಸ್‌ನ್ನು ದಾಖಲಿಸಿವುದಾಗಿ ಎಚ್ಚರಿಸಿದರು. ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅವಧಿ ಮುಗಿದಿರುವ ಔಷಧಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲೇ ಹಾಜರಿದ್ದ ನಗರಠಾಣೆ ಇನ್ಸ್‌ಪೆಕ್ಟರ್ ರಾಜಣ್ಣರಿಗೆ ಒಪ್ಪಿಸಿ ಕೂಡಲೇ ಪ್ರಕರಣ ದಾಖಲಿಸಬೇಕೆಂದು ಸೂಚಿಸಿದರು.ಒಳ ಮತ್ತು ಹೊರ ರೋಗಿಗಳ ವಾರ್ಡ್ ಪರಿಶೀಲಿಸಿದಾಗ ಗಂಡ ಹೆಂಡತಿ ಜಗಳ ಮಾಡಿಕೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ೩ ದಿನ ಕಳೆದರೂ ಪೊಲೀಸರು ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಪ್ರಕರಣ ದಾಖಲಿಸಲು ಇನ್ಸ್‌ಪೆಕ್ಟರ್ ರಾಜಣ್ಣಗೆ ಸೂಚಿಸಿದರು. ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಭೂ ದಾಖಲೆ ಇಲಾಖೆ ಕಚೇರಿಗೆ ಹಲವು ವರ್ಷದಿಂದ ಅಲೆದಾಡುತ್ತಿದ್ದರು ಕೊಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದಾಗ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಸರ್ವೇ ಇಲಾಖೆ ಅಧಿಕಾರಿಗಳು ರೈತರಿಂದ ಲಂಚ ಪಡೆಯುತ್ತಿರುವ ವಿಡಿಯೋವನ್ನು ಮೊಬೈಲ್‌ನಲ್ಲಿ ಉಪಲೋಕಾಯುಕ್ತರಿಗೆ ತೋರಿಸಿದಾಗ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ವಿ.ಗೀತಾರಿಗೆ ಸೂಚಿಸಿದರು. ಸ್ವಂತ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಬಂದಿರುವುದು ಪೂರ್ವಜನ್ಮದ ಪುಣ್ಯ. ನೀವು ಅಧಿಶಕ್ತಿಯಾಗಿ ಕೆಲಸ ಮಾಡಿ ತಾಲೂಕು ಕಚೇರಿಯಲ್ಲಿ ಜನರಿಗೆ ಒಳ್ಳೆಯದನ್ನು ಮಾಡಿ ಹೆಸರು ಗಳಿಸಬೇಕೆಂದು ನೀತಿ ಪಾಠ ಬೋಧಿಸಿ ಹುಟ್ಟೂರಿನ ಋಣ ತೀರಿಸುವ ಕೆಲಸ ಮಾಡಬೇಕೆಂದರು. ಕಸಬಾ ನಾಡ ಕಚೇರಿಗೆ ಭೇಟಿ ನೀಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬೋನೋಪೈಡ್ ಪ್ರಮಾಣ ಪತ್ರಗಳ ವಿತರಣೆ ಮತ್ತು ಅರ್ಜಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ ಬಿಪಿಲ್, ಎಪಿಎಲ್, ಅಂತ್ಯೋದಯ ಪಡಿತರ ಚೀಟಿಗಳಿಗೆ ಸಮರ್ಪಕವಾಗಿ ಆಹಾರ ಪದಾರ್ಥಗಳನ್ನು ಹಾಕುತ್ತಿದ್ದೀರಾ ?. ಅಕ್ಕಿ ಗೋಡೌನ್‌ನಲ್ಲಿ ಶೇಖರಣೆಯಾಗಿರುವ ವಿವರಣೆ ಪಡೆದುಕೊಂಡರು.
ಸೊನ್ನವಾಡಿ ಗ್ರಾಪಂಗೆ ಭೇಟಿ ನೀಡಿ ಕುಡಿಯುವ ನೀರು ಸರಬರಾಜು, ಕರ ವಸೂಲಿ ಬಗ್ಗೆ ಮಾಹಿತಿಗೆ ಪಡೆದುಕೊಂಡರು. ತಾಲೂಕಿನಾದ್ಯಂತ ೩೦ ಗ್ರಾಪಂಗಳಲ್ಲಿ ೨೦೨೫ನೇ ಸಾಲಿನಲ್ಲಿ ₹೪ ಕೋಟಿ ೪೯ ಲಕ್ಷ ಕರವಸೂಲಿ ಮಾಡಿರುವುದಕ್ಕೆ ತಾಪಂ ಇಒ ಡಾ.ಕೆ.ಸರ್ವೇಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿ ಪ್ರತಿವರ್ಷ ಕರವಸೂಲಿ ಪ್ರಮಾಣ ಹೆಚ್ಚಾಗುವಂತೆ ನಿಗಾವಹಿಸಬೇಕೆಂದು ಸೂಚಿಸಿದರು. ನಗರದ ಉಪನೋಂದಣಾಧಿಕಾರಿ ಕಚೇರಿ, ಬೆಸ್ಕಾಂ ಎ.ಇಇ, ಜಿ.ಪಂ. ಎ.ಇ.ಇ ಕಚೇರಿಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಇಂಜಿನಿಯರ್‌ಗಳ ಹುದ್ದೆಗಳು ಖಾಲಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಕೋಲಾರ ಲೋಕಾಯುಕ್ತ ಎಸ್.ಪಿ ಧನಂಜಯ, ಡಿವೈಎಸ್ಪಿ ಎಸ್.ಸುದೀರ್, ಲೋಕಾಯುಕ್ತ ಸತ್ರ ನ್ಯಾಯಾದೀಶ ಅರವಿಂದ್, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ರೇಣುಕಾರೆಡ್ಡಿ, ಆಂಜನಪ್ಪ, ತಹಸೀಲ್ದಾರ್ ವಿ.ಗೀತಾ, ತಾಪಂ ಇಒ ಡಾ.ಕೆ.ಸರ್ವೇಶ್ ಇದ್ದರು.