ಸಾರಾಂಶ
- ಲೋಕಸಭೆ ಚುನಾವಣೆ ಹಿನ್ನೆಲೆ ಪೀಪಲ್ಸ್ ಲಾಯರ್ಸ್ ಗಿಲ್ಡ್‌ನ ಅನೀಸ್ ಪಾಷ ಮನವಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯಾದ್ಯಂತ ಮೇ 7ರಂದು ನಡೆಯುವ 2ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ದೇಶದ ಸೌಹಾರ್ದ ಪರಂಪರೆ ಕಾಪಾಡಲು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಸಂವಿಧಾನವನ್ನು ರಕ್ಷಿಸಲು ತಮ್ಮ ಚಲಾಯಿಸಬೇಕು ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ರಾಜ್ಯ ಸಂಚಾಲಕ ಅನೀಸ್ ಪಾಷಾ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರೂ ತಮ್ಮ ಮತವನ್ನು ವ್ಯರ್ಥ ಮಾಡದೇ, ಹಾಳು ಮಾಡದೇ, ಸಂವಿಧಾನವನ್ನು ರಕ್ಷಿಸುವುದಕ್ಕೆ ಸದ್ಬಳಕೆ ಮಾಡಬೇಕು. ನಿರಂತರ ಶೋಷಣೆಗೊಳಗಾದ ಜನ, ತುಳಿತಕ್ಕೊಳಗಾದ ಮತ್ತು ಧ್ವನಿ ಇಲ್ಲದ ಸಮುದಾಯಗಳ ಪರ ಗಿಲ್ಡ್ ಹೋರಾಡ ನಡೆಸಿಕೊಂಡು ಬಂದಿದೆ ಎಂದರು.ಈ ಚುನಾವಣೆ ದೇಶದ ಭದ್ರತೆ, ಅಖಂಡತೆ, ಸಾರ್ವಭೌಮತ್ವಕ್ಕಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಮತ ಚಲಾಯಿಸುವಂತೆ ಜನತೆಗೆ ಮನವಿ ಮಾಡುತ್ತದೆ. ಭಾರತವು ಜಾತ್ಯತೀತ ರಾಷ್ಟ್ರ. ಇಲ್ಲಿ ಎಲ್ಲ ಧರ್ಮದವರಿಗೆ, ಎಲ್ಲ ವರ್ಗದ ಜನರಿಗೂ ಬದುಕುವ ಸಮಾನ ಹಕ್ಕುಗಳಿವೆ. ಧರ್ಮ, ದೇವರ ಹೆಸರಲ್ಲಿ ಮತ ಕೇಳುವ, ಕೋಮುವಾದ ಪ್ರತಿಪಾದಿಸುವ, ಸಂವಿಧಾನಿಕ ಹಕ್ಕು ಕಸಿಯುವ ಯಾವುದೇ ಪಕ್ಷವಿದ್ದರೂ, ಅದು ಜನವಿರೋಧಿ ಆಗಿರುತ್ತದೆ ಎಂದರು.
ಈಗ ಇರುವ ಕಾನೂನುಗಳನ್ನು ಕೇವಲ ತಿದ್ದುಪಡಿ ಮಾಡಿ ಕಾನೂನನ್ನು ಇನ್ನು ಭದ್ರಪಡಿಸಬಹುದಾಗಿದ್ದ ಜಾಗದಲ್ಲಿ ಬಹಳ ಮುಖ್ಯವಾದ ಹಳೇ ಕಾನೂನುಗಳನ್ನೇ ಸಂಪೂರ್ಣ ತೆಗೆದು ಮತ್ತೆ ಹೊಸ ಕಾನೂನನ್ನು ರೂಪಿಸಿರುವುದು ಸರಿಯಲ್ಲ. ಇದರಿಂದ ವಕೀಲ ಸಮುದಾಯಕ್ಕೆ ಮತ್ತು ಜನಸಾಮಾನ್ಯರಿಗೆ ತುಂಬಾ ತೊಂದರೆ ಆಗುತ್ತದೆ ಎಂದು ದೂರಿದರು.ಈ ಮೊದಲು ಹೊಸ ಕಾನೂನುಗಳನ್ನು ತರಬೇಕಾದರೆ ವಿವರ ಚರ್ಚೆ ನಡೆದು, ಕಾನೂನು ಜನಸಾಮಾನ್ಯರಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂದು ಸಂಸತ್ತಿನಲ್ಲಿ ಸುಧೀರ್ಘ ಚರ್ಚೆಗಳಾದ ನಂತರ ಅದನ್ನು ಜಾರಿ ಮಾಡಲಾಗುತ್ತಿತ್ತು. ಆದರೆ ಈಚೆಗೆ ನಾವು ಗಮನಿಸಿದಂತೆ 146 ಸಂಸದರನ್ನು ಸಂಸತ್ತಿನಿಂದ ಹೊರಗಿಟ್ಟು, 172 ಕಾನೂನುಗಳನ್ನು ಏಕಪಕ್ಷೀಯವಾಗಿ ಜಾರಿ ಮಾಡಲಾಗಿದೆ. ಇದು ಪ್ರಜಾಪಭುತಕ್ಕೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಲೆಕ್ಟೋಲ್ ಬಾಂಡ್ ಹಗರಣ ಇಡೀ ವಿಶ್ವದ ಬಹುದೊಡ್ಡ ಭ್ರಷ್ಟಚಾರದ ಹಗರಣವಾಗಿದೆ. ಆದರೂ ಜನಸಾಮಾನ್ಯರ ಸಮಸ್ಯೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಜಾತಿ ಧರ್ಮಗಳ ಹೇಳಿಕೆಗಳನ್ನು ಪ್ರಧಾನಿ ನೀಡಲು ಪ್ರಾರಂಭಿಸಿರುತ್ತಾರೆ. ಇದು ಅಸಂವಿಧಾನಿಕ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ವಕೀಲ ಅನೀಸ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಗಿಲ್ಡ್ ಪದಾಧಿಕಾರಿಗಳು, ವಕೀಲರಾದ ಬಿ.ಟಿ.ವಿಶ್ವನಾಥ, ರಂಗನಾಥ ಸ್ವಾಮಿ, ಜಸ್ಟಿನ್ ಜಯಕುಮಾರ, ಅಬ್ದುಲ್ ಸಮದ್, ಪರೀಕ್ಷಿತ್, ಮುಸ್ತಫಾ, ಅಂಜಿನಪ್ಪ, ಕೆ.ಅನೀಫ್ ಸಾಬ್ ಇತರರು ಇದ್ದರು.
- - - -3ಕೆಡಿವಿಜಿ6:ದಾವಣಗೆರೆಯಲ್ಲಿ ಶುಕ್ರವಾರ ಪೀಪಲ್ಸ್ ಲಾಯರ್ಸ್ ಗಿಲ್ಡ್‌ನ ರಾಜ್ಯ ಸಂಚಾಲಕ ಅನೀಸ್ ಪಾಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.