ಸಾಹಿತ್ಯ ಸಂಕಟಗಳನ್ನು ಎದುರಿಸುವ ಸಾಮರ್ಥ್ಯದ ದೀವಿಗೆ

| Published : Mar 25 2025, 12:49 AM IST

ಸಾರಾಂಶ

ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿರುವ ಇಂಗ್ಲಿಷ್‌ ಲೇಖಕರಲ್ಲಿ ಟಿ.ಎಸ್‌.ಎಲಿಯಟ್ ಕೂಡ ಪ್ರಮುಖರು.

ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿರುವ ಇಂಗ್ಲಿಷ್‌ ಲೇಖಕರಲ್ಲಿ ಟಿ.ಎಸ್‌.ಎಲಿಯಟ್ ಕೂಡ ಪ್ರಮುಖರು. ಸಾಹಿತ್ಯ ಪರಂಪರೆಯನ್ನು ಓದುವ ಹಾಗೂ ಅರಿಯುವ ಚಟುವಟಿಕೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಅಧ್ಯಯನದ ಮೂಲಕ ಇಂದಿನ ತಲೆಮಾರಿಗೆ ತಲುಪಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡೋರಿನ್ ಸ್ನೇಹಲತಾ ಅಭಿಪ್ರಾಯಪಟ್ಟರು.

ಇಲ್ಲಿನ ಡಾ.ಡಿ.ಆರ್. ನಾಗರಾಜ್ ಬಳಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ಕನ್ನಡ-ಇಂಗ್ಲಿಷ್ ಸಾಹಿತ್ಯ ವೇದಿಕೆ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಬರೆದಿರುವ "ಟಿ.ಎಸ್.ಎಲಿಯಟ್ ನಾಟಕಗಳ ತೌಲನಿಕ ಅಧ್ಯಯನ " ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಇಂದಿನ ತಲೆಮಾರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಓದಿನ ಪ್ರಭಾವಕ್ಕೆ ಒಳಗಾಗಬೇಕು. ಈ ದಿಸೆಯಲ್ಲಿ ಇವತ್ತಿನ ಮನುಷ್ಯ ಸಂಕಟಗಳನ್ನು ಎದುರಿಸುವ ಶಕ್ತಿಯನ್ನು ಇಂತಹ ಓದಿನ ಮೂಲಕ ಪಡೆಯುವ ಸಾಮರ್ಥ್ಯ ಹೊಸ ತಲೆಮಾರಿಗೆ ದಕ್ಕಬೇಕಿದೆ ಎಂದರು.

ಯುವ ಕವಿ ಹೇಮಂತ್ ಲಿಂಗಪ್ಪ, ಎಲಿಯಟ್‌ನ ನಾಟಕಗಳಲ್ಲಿ ಬರುವ ನಾಟಕೀಯತೆಗಳ ಬಗ್ಗೆ ಲೇಖಕರು ನಡೆಸಿರುವ ಅಧ್ಯಯನದ ಮಹತ್ವವನ್ನು ವಿಸ್ತ್ರತವಾಗಿ ನೋಡಬೇಕು. ಎರಡು ವಿಶ್ವ ಮಹಾ ಯುದ್ಧಗಳ ಕಾಲದಲ್ಲಿ ಬದುಕಿದ್ದ ಕವಿ ಎಲಿಯಟ್ ಮೇಲೆ ಈ ಯುದ್ಧಗಳು ತಂದ ಭ್ರಮನಿರಸನ ಮತ್ತು ಆಧ್ಯಾತ್ಮಿಕ ಶೂನ್ಯತೆಗಳಂತಹ ಮಾನವ ಸಂಕಟಗಳ ಬಗ್ಗೆ ಗಮನ ಹರಿಸಿ ಈತ, ತನ್ನ ಸಾಹಿತ್ಯದ ಮೂಲಕ ಇಡೀ ಮಾನವ ಜನಾಂಗವನ್ನು ಕಣ್ಣು ತೆರೆಸುತ್ತಾನೆ. ಈ ಆಧುನಿಕತೆ, ಯುದ್ದಕೋರತನಗಳು ಉಂಟು ಮಾಡಿದ ಘಾಸಿ ಹಾಗೂ ಭಗ್ನತೆಗಳನ್ನು ಎಲಿಯಟ್ ತನ್ನ ನಾಟಕಗಳಲ್ಲಿ ಪರಿಣಾಮಕಾರಿಯಾಗಿ ತಂದಿದ್ದಾನೆ. ಈತ ತನ್ನ ನಾಟಕಗಳಲ್ಲಿ ಕಾವ್ಯವನ್ನು ಬಳಸುವ ರೀತಿ, ಸಂಕೇತ ಮತ್ತು ಪ್ರತಿಭಾಶಕ್ತಿ ನಿಜಕ್ಕೂ ಅನನ್ಯವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ, ಕನ್ನಡ ವಿಭಾಗ ಮುಖ್ಯಸ್ಥ ಡಾ.ರವಿಕುಮಾರ್, ಐಕ್ಯೂಎಸಿ ಸಂಯೋಜಕ ಗಂಗಾಧರಯ್ಯ, ಕಾಲೇಜಿನ ಬೋಧಕವರ್ಗ, ಬೋಧಕೇತರ ಸಿಬ್ಬಂದಿ, ಡಿ.ಆರ್.ನಾಗರಾಜ್ ಬಳಗದ ಸದಸ್ಯರು ಭಾಗವಹಿಸಿದ್ದರು.

24ಕೆಡಿಬಿಪಿ1- ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿನ್ನುಪ್ರಕಾಶ್‌ ಶ್ರೀರಾಮನಹಳ್ಳಿ ಬರೆದಿರುವ "ಟಿ.ಎಸ್.ಎಲಿಯಟ್ ನಾಟಕಗಳ ತೌಲನಿಕ ಅಧ್ಯಯನ " ಸಾಹಿತ್ಯ ಕೃತಿಯನ್ನು ಬಿಡುಗಡೆ ಮಾಡಲಾಯಿತು.