ಸಾರಾಂಶ
ಮಧ್ಯಾಹ್ನ ಮಕ್ಕಳಿಗೆ ಊಟ ಬಡಿಸುವ ಸಂದರ್ಭ ಅಂಗನವಾಡಿ ಸಹಾಯಕಿಯ ಕೈ ತಪ್ಪಿನಿಂದ ಮಗುವಿನ ತೊಡೆ ಮೇಲೆ ಬಿಸಿ ಸಾಂಬಾರ್ ಚೆಲ್ಲಿದೆ. ಪರಿಣಾಮ ಮಗುವಿನ ತೊಡೆಯ ಬಹುತೇಕ ಭಾಗ ಸುಟ್ಟ ಗಾಯಗಳಾಗಿವೆ.
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಗುವಿನ ಮೇಲೆ ಬಿಸಿ ಸಾಂಬಾರ್ ಚೆಲ್ಲಿ ಮಗು ತೀವ್ರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.ಅಂಗನವಾಡಿ ಕೇಂದ್ರ ವ್ಯಾಪ್ತಿಯ ಕೂಡಿಗೆ ಕೊಪ್ಪಲು ಗ್ರಾಮದ ವನಿತಾ ಎಂಬವರ ಪುತ್ರಿ ತನ್ವರ್ಯ (6) ಗಾಯಗೊಂಡ ಮಗು.
ಮಧ್ಯಾಹ್ನ ಮಕ್ಕಳಿಗೆ ಊಟ ಬಡಿಸುವ ಸಂದರ್ಭ ಅಂಗನವಾಡಿ ಸಹಾಯಕಿಯ ಕೈ ತಪ್ಪಿನಿಂದ ಮಗುವಿನ ತೊಡೆ ಮೇಲೆ ಬಿಸಿ ಸಾಂಬಾರ್ ಚೆಲ್ಲಿದೆ. ಪರಿಣಾಮ ಮಗುವಿನ ತೊಡೆಯ ಬಹುತೇಕ ಭಾಗ ಸುಟ್ಟು ಗಾಯಗಳಾಗಿವೆ.ಘಟನೆ ನಡೆದ ಕೂಡಲೇ ಅಂಗನವಾಡಿ ಸಿಬ್ಬಂದಿ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀದೇವಿ, ಮೇಲ್ವಿಚಾರಕಿ ಸಾವಿತ್ರಮ್ಮ, ರಂಜಿತಾ ಭೇಟಿ ನೀಡಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಿ ಆರೈಕೆ ಮಾಡುವ ಭರವಸೆ ನೀಡಿದರು. ಅಂಗವಾಡಿ ಕಾರ್ಯಕರ್ತೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.