ಒಂಬೈನೂರ ವರುಷಗಳ ಹಿಂದಯೇ ಬಸವಣ್ಣನವರು ಎಲ್ಲರಿಗೂ ಕೂಡ ಸಮಾನತೆ ಕೊಡಬೇಕು, ಸಮಾನತೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಮಾನತೆ ಇಲ್ಲದೆ ಯಾರು ಕೂಡ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬರು ಕೂಡ ಕಾಯಕ ಮಾಡಿ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು ಸೇರಿದಂತೆ ಇನ್ನೂ ಅನೇಕ ವಿಚಾರಗಳನ್ನು ಅನುಷ್ಠಾನಕ್ಕೆ ತಂದಿದ್ದರು ಎಂದು ನಾವು ಮಾತಾನಾಡುತ್ತಾ ಇರುತ್ತೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಸವಣ್ಣನವರ ವಿಚಾರಗಳನ್ನು ನಾವು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದೇವೆ ಎಂಬ ಸಂಶಯ ಕಾಡುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಸರ್ಕಾರಿ ಅತಿಥಿಗೃಹದ ಸಭಾಂಗಣದಲ್ಲಿ ಮೈಸೂರು ಬಸವ ಬಳಗಗಳ ಒಕ್ಕೂಟ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರ ಕಲಾವಿದ ಎಲ್‌. ಶಿವಲಿಂಗಪ್ಪ ಅವರು ರಚಿಸಿರುವ ಮಹಾ ಮಾನನವತಾವಾದಿ ಬಸವಣ್ಣ, ವೀರ ವೈರಾಗ್ಯ ನಿಧಿ ಅಲ್ಲಮ ಪ್ರಭು ಕೃತಿಗಳ ಹಿಂದಿ ಹಾಗೂ ಮರಾಠಿ ಅನುವಾದ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಒಂಬೈನೂರ ವರುಷಗಳ ಹಿಂದಯೇ ಬಸವಣ್ಣನವರು ಎಲ್ಲರಿಗೂ ಕೂಡ ಸಮಾನತೆ ಕೊಡಬೇಕು, ಸಮಾನತೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಮಾನತೆ ಇಲ್ಲದೆ ಯಾರು ಕೂಡ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬರು ಕೂಡ ಕಾಯಕ ಮಾಡಿ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು ಸೇರಿದಂತೆ ಇನ್ನೂ ಅನೇಕ ವಿಚಾರಗಳನ್ನು ಅನುಷ್ಠಾನಕ್ಕೆ ತಂದಿದ್ದರು ಎಂದು ನಾವು ಮಾತಾನಾಡುತ್ತಾ ಇರುತ್ತೇವೆ. ಆದರೆ ಅದನ್ನು ಎಷ್ಟು ಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದೇವೆ ಎನ್ನುವ ಸಂಶಯ ನಮ್ಮನ್ನು ಕೂಡ ಕಾಡುತ್ತಾ ಇದೆ. ಆದ್ದರಿಂದ ನಾವು ಏನ್ನನ್ನು ಮಾತನಾಡುತ್ತೇವೆ ಅದನ್ನು ನಾವೆಲ್ಲ ನಮ್ಮ ನಡುವಳಿಕೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಬದಲಾವಣೆ ಆಗಬೇಕು ಎಂದರು.

ಬಸವಣ್ಣವರ ಅನೇಕ ವಿಚಾರಧಾರೆಗಳು, ಅವರ ದೂರದೃಷ್ಟಿಯ ಚಿಂತನೆ ರಾಷ್ಟ್ರ, ರಾಜ್ಯ ನಿರ್ಮಾಣದಲ್ಲಿ ಬಳಸಿಕೊಳ್ಳುವುದು ನಮ್ಮ ಕರ್ತವ್ಯ. ಈ ದೇಶದ ಕೋಟ್ಯಂತರ ಜನ ಬಸವಣ್ಣನವರ ಬದುಕನ್ನು, ಸಂದೇಶವನ್ನು ಮೈಗೊತ್ತಿಕೊಂಡು ಭಗವಂತನ ಸ್ವರೂಪದಲ್ಲಿ ನೋಡುತ್ತಾ, ಅವರ ಆಚಾರ-ವಿಚಾರ ಅನುಸರಿಸುತ್ತಾ ಇದ್ದಾರೆ ಎಂದರು.

ಮಹಾ ಮಾನವತಾವಾದಿ ಬಸವಣ್ಣನವರ ವಿಚಾರಧಾರೆಗಳನ್ನು ಮಾತಾನಾಡುವ ನಾವು ಅವುಗಳನ್ನು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದೇವೆ ಎನ್ನುವುದು ಒಂದು ದೊಡ್ಡ ಪ್ರಶ್ನೆ. ಬೇವಿನ ಬೀಜ ಬಿತ್ತಿ, ಬೆಲ್ಲದ ಕಟ್ಟೆ ಕಟ್ಟಿ, ಆಕಳ ಹಾಲನ್ನು ಎರೆದು, ಜೇನುತುಪ್ಪವ ಹಾಕಿದರೂ ಅದು ಕಹಿಯಾಗದೇ ಸಿಹಿಯಾಗುತ್ತದಯೇ ಎನ್ನುವ ವಚನಗಳು ಸೇರಿದಂತೆ ಹಲವಾರು ವಚನಗಳನ್ನು ನಾವು ಹೇಳುತ್ತೇವೆ. ಆದರೆ ನಮ್ಮ ನಡವಳಿಕೆ ಯಾವ ರೀತಿ ಇದೆ. ಎಷ್ಟು ಜನರಿಗೆ ಕಾಯಕ ಮಾಡುವುದಕ್ಕೆ ಅವಕಾಶ ಮಾಡಿ ಕೊಡುತ್ತೇವೆ ಎಂದು ಅವರು ಪ್ರಶ್ನಿಸಿದರು.

ಸಾಮಾನ್ಯರನ್ನು ಎಷ್ಟು ಮಟ್ಟಿಗೆ ನಾವು ನೋಡುತ್ತೇವೆ? ನಮ್ಮವರೇ ಆಗಿದ್ದರೂ ಕೂಡ ಅವರು ಬಡತನದಲ್ಲಿ ಇದರೆ ಸಮಾನತೆಯಿಂದ ನಾವು ಕಾಣುವುದಿಲ್ಲ. ಬಸವಣ್ಣನವರು ಹೇಳಿರುವ ವಿಚಾರಗಳನ್ನು ಎಲ್ಲರಿಗೂ ಹೇಳುತ್ತೇವೆ. ನಾವೇ ಸ್ವತಃ ತಪ್ಪು ಮಾಡುತ್ತಾ ಇರುತ್ತೇವೆ. ಇದು ಒಂದು ರೀತಿ ಚರ್ಚೆ ವಿಷಯ ಆಗಿದೆ ಎಂದರು.

ಕಲಾವಿದ ಶಿವಲಿಂಗಪ್ಪನವರು ನಿಜ ಜೀವನದಲ್ಲಿ ಬಸವಣ್ಣ ಎಂದರೆ ಏನು?, ಅವರ ಕಾಯಕ ಏನು, ಅವರ ತೀರ್ಮಾನಗಳು ಯಾವುದು, ಈ ರೀತಿ ನಡೆದುಕೊಳ್ಳುವುದಕ್ಕೆ ಬರೆದಿರುವಂತಹ ಸಂದೇಶ, ತಿಳುವಳಿಕೆಯೂ ನಿಜವಾಗಲೂ ಶ್ಲಾಘನೀಯವಾಗಿದೆ. ಈ ಕೃತಿಯನ್ನು ಎಷ್ಟು ಮಂದಿ ಓದುತ್ತಾರೆ ಎನ್ನುವುದಕ್ಕಿಂತ, ಅದನ್ನು ಓದಿ ಅರ್ಥೈಸಿಕೊಂಡು ಹತ್ತು ಜನರ ಶರಣರ ದಾದಿಯಲ್ಲಿ ನಡೆದರೇ ಅದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ ಎಂದರು.

ಬಸವಣ್ಣನವರು ಹೆಣ್ಣು ಮಕ್ಕಳಿಗೆ ಆದ್ಯತೆ ಕೊಡಬೇಕು. ಅವರು ಕೂಡ ಮುಖ್ಯವಾಹಿನಿಗೆ ಬರಬೇಕು ಎಂದು ಆದ್ಯತೆ ಕೊಟ್ಟರು. ಅದೇ ರೀತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಮಾರು ವರ್ಷಗಳಿಂದ ಜಾರಿಯಾಗದೇ ಇದ್ದ ಮಹಿಳಾ ಮೀಸಲಾತಿ ವಿಧೇಯಕವನ್ನು ಜಾರಿಗೆ ತರಲು ಪ್ರಯತ್ನಿಸಿದರು. ಪ್ರತಿಪಕ್ಷಗಳು ವಿಧೇಯಕವನ್ನು ಸೋಲಿಸಿದವು. ಆದರೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಹಿಳೆಯರು ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ವಿಧೇಯಕ ವಿರೋಧಿಸಿದವರಿಗೆ ಸೋಲನ್ನು ಉಣಿಸಿದ್ದಾರೆ ಎಂದರು.

ಹಿರಿಯ ಲೇಖಕ ಡಾ. ಪ್ರಧಾನ ಗುರುದತ್ತ, ಕೃತಿಕಾರ ಎಲ್‌. ಶಿವಲಿಂಗಪ್ಪ, ಬಸವ ಬಳಗಳ ಒಕ್ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್‌, ಜಮುನಾರಾಣಿ ಮಿರ್ಲೆ ಕೇಬಲ್‌ ಮಹೇಶ್‌, ಆಲನಹಳ್ಳಿ ಮಹದೇವಸ್ವಾಮಿ, ಸ್ವಾಮಿ ಮೊದಲಾದವರು ಇದ್ದರು.