ಸಾರಾಂಶ
ಇಂದಿನ ಯುವಪೀಳಿಗೆ ಧೂಮಪಾನ, ಮಧ್ಯಪಾನ ಹಾಗೂ ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಬದಲು ಆರೋಗ್ಯಯುತವಾದ ಆಹಾರಗಳನ್ನು ಬಳಸಬೇಕು. ಉತ್ತಮ ಆಹಾರ ಶೈಲಿ, ಲಘು ವ್ಯಾಯಾಮ, ಪ್ರಾಣಾಯಾಮ, ನಿಗಧಿತ ನಿದ್ರಾ ಸಮಯ ಹಾಗೂ ಉತ್ತಮ ಚಿಂತನೆಗಳು ನಮ್ಮ ದೇಹದ ಮತ್ತು ಮನಸ್ಸಿನ ಆರೋಗ್ಯ ಸಂಪತ್ತನ್ನು ವೃದ್ಧಿಸಬಲ್ಲವು .
ಕನ್ನಡಪ್ರಭ ವಾರ್ತೆ ಮೈಸೂರು
ತಂಬಾಕು ಸೇವನೆಯು ಯಾವುದೇ ರೀತಿಯ ಕ್ಯಾನ್ಸರ್ ಗಳಿಗೆ ಮೂಲಭೂತ ಕಾರಣವಾಗಬಹುದು. ದುಶ್ಚಟಗಳಿಂದ ಸಂಪೂರ್ಣ ದೂರವಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ರೇಡಿಯೇಷನ್ ಆಂಕೋಲಾಜಿಸ್ಟ್ ಡಾ. ವಿನಯ್ ಕುಮಾರ್ ಮುತ್ತಗಿ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸ್ವಯಂ ಸೇವಕ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ವಿದ್ಯಾರ್ಥಿ ಸಂಸತ್, ಐಕ್ಯೂಎಸಿ ಹಾಗೂ ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜಾಗೃತಿ ಹಾಗೂ ಉಚಿತ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ದಶಕದಲ್ಲಿ ಕ್ಯಾನ್ಸರ್ ಸಂಬಂಧಿತ ರೋಗ ಸಮಸ್ಯೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಎಲ್ಲಾ ವಯೋಮಾನದ ಯುವಕ- ಯುವತಿಯರು, ಪುರುಷ- ಮಹಿಳೆಯರಲ್ಲಿ ತಂಬಾಕು, ಗುಟ್ಕಾ ಸೇವನೆ ಹಾಗೂ ಇತರೆ ದುಶ್ಚಟಗಳಿಂದ ಕ್ಯಾನ್ಸರ್ ಕಾರಕ ತೊಂದರೆಗಳು ಕಂಡು ಬರುತ್ತಿವೆ. ಪ್ರಸಕ್ತ ದಿನಗಳಲ್ಲಿ ಶ್ವಾಸಕೋಶ, ಬಾಯಿ ಮತ್ತು ಗಂಟಲು ಹಾಗೂ ಸ್ತನ ಕ್ಯಾನ್ಸರ್ ಗಳಂತಹ ರೋಗಗಳು ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿವೆ ಎಂದರು.ಇಂದಿನ ಯುವಪೀಳಿಗೆ ಧೂಮಪಾನ, ಮಧ್ಯಪಾನ ಹಾಗೂ ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಬದಲು ಆರೋಗ್ಯಯುತವಾದ ಆಹಾರಗಳನ್ನು ಬಳಸಬೇಕು. ಉತ್ತಮ ಆಹಾರ ಶೈಲಿ, ಲಘು ವ್ಯಾಯಾಮ, ಪ್ರಾಣಾಯಾಮ, ನಿಗಧಿತ ನಿದ್ರಾ ಸಮಯ ಹಾಗೂ ಉತ್ತಮ ಚಿಂತನೆಗಳು ನಮ್ಮ ದೇಹದ ಮತ್ತು ಮನಸ್ಸಿನ ಆರೋಗ್ಯ ಸಂಪತ್ತನ್ನು ವೃದ್ಧಿಸಬಲ್ಲವು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್. ರಮೇಶ್, ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ.ಜಿ. ದೊಡ್ಡರಸಯ್ಯ, ಡಾ. ಸಿದ್ದರಾಜು, ವಿದ್ಯಾರ್ಥಿ ಸಂಸತ್ ಸಂಚಾಲಕಿ ಡಾ.ಪಿ.ಜಿ. ಪುಷ್ಪರಾಣಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯೆ ಡಾ. ಅರ್ಚನಾ, ಮಾರುಕಟ್ಟೆ ವ್ಯವಸ್ಥಾಪಕ ಸುನೀಲ್ ಕುಮಾರ್, ನರ್ಸಿಂಗ್ ವಿಭಾಗದ ಸಹನಾ, ಪ್ರಮೋದಿನಿ ಮೊದಲಾದವರು ಇದ್ದರು.