ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದರೂ ಜಿಲ್ಲಾದ್ಯಂತ 1,612 ಶಾಲೆಗಳ ಪೈಕಿ ಕೇವಲ 62 ಶಾಲೆಗಳು ಮಾತ್ರ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ(Tobacco Free Educational Institution) ಆ್ಯಪ್‌ನಲ್ಲಿ ನೋಂದಣಿಯಾಗಿದೆ.
ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಗರಿಮಾ
ಕನ್ನಡಪ್ರಭ ವಾರ್ತೆ ಹೊಸಪೇಟೆ
ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದರೂ ಜಿಲ್ಲಾದ್ಯಂತ 1,612 ಶಾಲೆಗಳ ಪೈಕಿ ಕೇವಲ 62 ಶಾಲೆಗಳು ಮಾತ್ರ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ(Tobacco Free Educational Institution) ಆ್ಯಪ್‌ನಲ್ಲಿ ನೋಂದಣಿಯಾಗಿದೆ. 7 ದಿನಗಳಲ್ಲಿ ಶೇ. 100ರಷ್ಟು ನೋಂದಣಿಯಾಗಬೇಕು. ಇಲ್ಲವಾದಲ್ಲಿ ಸಂಬಂದಪಟ್ಟವರ ವಿರುದ್ಧ ನೋಟಿಸ್ ನೀಡುವುದರ ಜತೆಗೆ ಕಾನೂನಾತ್ಮಕವಾಗಿ ಇಂಕ್ರಿಮೆಂಟ್ ತಡೆಹಿಡಿಯಲಾಗುವುದು ಎಂದು ಜಿಪಂ ಸಿಇಒ ಗರಿಮಾ ಪನ್ವಾರ್ ಎಚ್ಚರಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಶಾಲೆಗಳಿಗೆ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸದಿರುವುದಕ್ಕೆ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆಯ ಹಾಗೂ ಮುಖ್ಯ ಶಿಕ್ಷಕರು ನೋಂದಣಿ ಪ್ರಕ್ರಿಯೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿ, ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಕ್ರಮವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ತಂಬಾಕು ಮುಕ್ತವಾಗಿಡುವುದು. ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಮಕ್ಕಳನ್ನು ತಂಬಾಕು ಉತ್ಪನ್ನಗಳಿಂದ ದೂರವಿಡುವ ನಿಟ್ಟಿನಲ್ಲಿ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ನೋಂದಣಿ ಮಹತ್ವದ್ದಾಗಿದೆ. ಹೀಗಾಗಿ ಗಡುವಿನೊಳಗೆ ಜಿಲ್ಲೆಯ ಎಲ್ಲ ಶಾಲೆಗಳು ನೋಂದಣಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.ಕೋಟ್ಪಾ ಕಾಯ್ದೆ ಉಲ್ಲಂಘನೆಗಳ ವಿರುದ್ಧ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ದಾಳಿ ನಡೆಸಿ ಒಟ್ಟು ₹3.95 ಲಕ್ಷ ದಂಡ ವಿಧಿಸಿ ಸಂಗ್ರಹಿಸಲಾಗಿದೆ ಎಂದರು.
ತಂಬಾಕು ಉತ್ಪನ್ನಗಳ ಮಾರಾಟಗಾರರು ನಿಯಮಾನುಸಾರ ₹500 ಶುಲ್ಕ ಪಾವತಿಸಿ ಐದು ವರ್ಷಗಳ ಅವಧಿಗೆ ಪ್ರತ್ಯೇಕ ವೆಂಡರ್ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದ್ದು, ಎಲ್ಲ ಸ್ಥಳೀಯ ಸಂಸ್ಥೆಗಳು ವ್ಯಾಪಾರಿಗಳಿಗೆ ಅಗತ್ಯ ಮಾಹಿತಿ ನೀಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖನಾಯ್ಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಭಾಸ್ಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.