ಸಾರಾಂಶ
ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಪ್ರತಿ ಮಂಡಳ ವ್ಯಾಪ್ತಿಯಲ್ಲಿ ರಾಸ್ತಾ ರೋಖೋ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಶಿರಸಿ: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ, ಬೀದಿಗಿಳಿದು ಹೋರಾಟ ಮಾಡಲು ಬಿಜೆಪಿಯಿಂದ ತೀರ್ಮಾನಿಸಲಾಗಿದೆ. ಜೂ. ೨೦ರಂದು ಜಿಲ್ಲೆಯ ಪ್ರತಿ ಮಂಡಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಪ್ರತಿ ಮಂಡಳ ವ್ಯಾಪ್ತಿಯಲ್ಲಿ ರಾಸ್ತಾ ರೋಖೋ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆಯಾದ್ದರಿಂದ ರಾಜ್ಯದಲ್ಲಿ ಕೇವಲ ₹೧ ಏರಿಕೆ ಮಾಡಿದ್ದರಿಂದ ಇದೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗದೇ ಇದ್ದಾಗ, ಗ್ಯಾರಂಟಿ ಯೋಜನೆಗಳಿಗೆ ಹೊಂದಾಣಿಕೆ ಮಾಡಲು ಪೆಟ್ರೋಲ್ ಲೀಟರ್‌ಗೆ ₹೩, ಡೀಸೆಲ್ ₹೩.೫ ಏರಿಕೆ ಮಾಡಲಾಗಿದೆ. ಇದರಿಂದ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ ದರ ಏರಿಕೆಯಾಗಿದ್ದು, ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚರ್ಚೆ ಮಾಡಿ ದರ ಇಳಿಕೆಯ ಕುರಿತು ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.ವಾಲ್ಮೀಕಿ ನಿಗಮದ ₹೧೯೭ ಕೋಟಿ ತೆಲಂಗಾಣ ರಾಜ್ಯದ ಚುನಾವಣೆಗೆ ವರ್ಗಾವಣೆ ಮಾಡಿದ್ದಾರೆ. ಮುಂದೆ ನಡೆಯುವ ವಿವಿಧ ರಾಜ್ಯದ ಚುನಾವಣೆಗೆ ಕಳುಹಿಸಲು ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಮಾಡಿಕೊಡಲು ತೈಲ ಬೆಲೆ ಏರಿಕೆ ಮಾಡಿದ್ದಾರೆ. ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದಾದರೆ ಚುನಾವಣೆಗೆ ಹೋಗಲಿ ಎಂದು ಆಗ್ರಹಿಸಿದರು.ಜೂ. ೨೧ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಲ್ಲ ಮಂಡಳಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅಂದು ಬೆಳಗ್ಗೆ ೬ ಗಂಟೆಗೆ ನಗರದ ಪಂಡಿತ್ ದೀನ ದಯಾಳ್ ಸಭಾಭವನದಲ್ಲಿ ಬೆಳಗ್ಗೆ ೬ ಗಂಟೆಗೆ ಜಿಲ್ಲಾ ಮಟ್ಟದ ಯೋಗ ದಿನಾಚರಣೆ ಆಯೋಜಿಸಲಾಗಿದೆ. ಜೂ. ೨೩ರಂದು ಶ್ಯಾಮಪ್ರಸಾದ ಮುಖರ್ಜಿ ಬಲಿದಾನ ದಿವಸ ಆ ಪ್ರಯುಕ್ತ ಸೇವಾ ಚಟುವಟಿಕೆ ಪ್ರಾರಂಭಿಸಲಾಗಿದೆ. ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮಕ್ಕೆ ಜೂ. ೫ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಆ ಪ್ರಯುಕ್ತ ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜೂ. ೨೫ರಂದು ತುರ್ತು ಪರಿಸ್ಥಿತಿ ಕರಾಳದಿನ ಪ್ರಯುಕ್ತ ಶಿವಮೊಗ್ಗ ಕುವೆಂಪು ಮಂದಿರದಲ್ಲಿ ಉತ್ತರಕನ್ನಡ, ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯಲ್ಲಿ ಸಂವಿಧಾನದ ಕುರಿತು ಕಾರ್ಯಾಗಾರ ಆಯೋಜಿಸಲಾಗುತ್ತದೆ. ಜೂ. ೩೦ರಂದು ಮನ್ ಕೀ ಬಾತ್ ಕಾರ್ಯಕ್ರಮ ಬೂತ್ ಮಟ್ಟದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ರವಿಚಂದ್ರ ಶೆಟ್ಟಿ, ಪ್ರಮುಖರಾದ ಶ್ರೀಕಾಂತ ಬಳ್ಳಾರಿ, ಶ್ರೀರಾಮ ನಾಯ್ಕ ಇದ್ದರು.