ಇಂದು ಬಿ.ಎಸ್. ಬೇಲೇರಿ ಸುಖಮುನೇಶ್ವರ ಮಹಾ ರಥೋತ್ಸವ

| Published : Feb 28 2025, 02:01 AM IST

ಸಾರಾಂಶ

ಇಲ್ಲಿಗೆ ಸಮೀಪದ ಬಿ.ಎಸ್. ಬೇಲೇರಿ ಹಾಗೂ ಬಸರಕೋಡ ಗ್ರಾಮಗಳ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಜನರ ಪಾಲಿಗೆ ದಾರಿದೀಪವಾದ ತಪಸ್ವಿ ಸುಖಮುನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಫೆ. 28ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.

ಹೊಳೆಆಲೂರ: ಇಲ್ಲಿಗೆ ಸಮೀಪದ ಬಿ.ಎಸ್. ಬೇಲೇರಿ ಹಾಗೂ ಬಸರಕೋಡ ಗ್ರಾಮಗಳ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಜನರ ಪಾಲಿಗೆ ದಾರಿದೀಪವಾದ ತಪಸ್ವಿ ಸುಖಮುನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಫೆ. 28ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.

ರಾತ್ರಿ 8 ಗಂಟೆಗೆ ಶರಣಬಸವೇಶ್ವರ ಪುರಾಣ ಮಂಗಲಗೊಳ್ಳುತ್ತದೆ. ಬೇದವಟ್ಟಿಯ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿವಯೋಗ ಮಂದಿರದ ಸಂಸ್ಥೆಯ ಉಪಾಧ್ಯಕ್ಷ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು, ಬ್ರಹ್ಮನಮಠ ಸಂಸ್ಥಾನದ ಜಗದಾರಾಧ್ಯಾ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು, ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಗಳು, ರಾಮದುರ್ಗದ ಶಾಂತವೀರೇಶ್ವರ ಮಠದ ಶಾಂತವೀರ ಸ್ವಾಮಿಗಳು ಸಾನಿಧ್ಯ ವಹಿಸುವರು.

ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಬೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು, ವಿರಕ್ತಮಠದ ಶಿವಬಸವ ಸ್ವಾಮಿಗಳು, ನವಗ್ರಹ ಹಿರೇಮಠದ ಶಿವಪೂಜ ಶಿವಾಚಾರ್ಯ ಸ್ವಾಮಿಗಳು, ಸಿದ್ದನಕೊಳ್ಳದ ಶಿವಕುಮಾರ ಸ್ವಾಮಿಗಳು, ಚಿಕ್ಕಮಣ್ಣೂರಿನ ಚಂದ್ರಶೇಖರ ದೇವರು, ಹೊಳೆಆಲೂರಿನ ಯಚ್ಚರಸ್ವಾಮಿಗಳು, ಸೂಡಿಯ ವಿದ್ವಾನ್ ಭುಜಂಗ ಶರ್ಮ ವಿ. ಜೋಶಿ, ಪಂಚಾಂಗಕರ್ತ, ಪ್ರವಚನಕಾರರಾದ ವಿರೂಪಾಕ್ಷ ಶಾಸ್ತ್ರಿಗಳು, ತಬಲಾವಾದಕ ಎಸ್.ಎಸ್. ಹಿರೇಮಠ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಬೇಲೇರಿ ಭಕ್ತರಿಂದ ನವಲಗುಂದ ಗವಿಮಠದ ಶ್ರೀಗಳಿಗೆ ತುಲಾಭಾರ ಸೇವೆ ಜರುಗುವುದು. ಸುಮಂಗಲಿಯರಿಂದ ಉಡಿ ತುಂಬುವ ಕಾರ್ಯಕ್ರಮ, ಮರಳಿ ಮಿಂಚಿದ ಮುತ್ತೈದೆ ಹಾಗೂ ರೈತನ ರಾಜ್ಯದಲ್ಲಿ ರಾಕ್ಷಸನ ಆರ್ಭಟ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿವೆ.ಬೇಲೇರಿ ಹಾಗೂ ಬಸರಕೋಡ ಹಾಗೂ ಸುತ್ತಮತ್ತಲಿನ ಗ್ರಾಮಗಳ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಭಕ್ತರ ಮನ, ಮನೆಯಲ್ಲಿ ನೆಲೆಸಿರುತ್ತಾರೆ. ಹೀಗಾಗಿ ಎರಡು ಗ್ರಾಮಗಳ ಭಕ್ತರು ಸೇರಿ ಸುಮಾರು ವರ್ಷಗಳಿಂದ ತಮ್ಮ ಆರಾಧ್ಯ ದೈವ ಸುಖಮುನೇಶ್ವರ ಜಾತ್ರೆಯನ್ನು ಸಂಭ್ರಮದಿಂದ ಆಚರಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ಎರಡು ಗ್ರಾಮಗಳಲ್ಲಿ ಜಾತ್ರಾ ಮಹೋತ್ಸವ ದಿನ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿ ಸಂಭ್ರಮಿಸುತ್ತಾರೆ.ಗ್ರಾಮಗಳ ಎಲ್ಲ ಧರ್ಮಿಯರು ಕೂಡಿ ಪವಾಡಪುರುಷನ ಜಾತ್ರಾಮಹೋತ್ಸವವನ್ನು ಆಚರಿಸುತ್ತಾರೆ. ತಮ್ಮ ತಮ್ಮ ಸಂಬಂಧಿಗಳನ್ನು ಜಾತ್ರೆಗೆ ತಪ್ಪದೇ ಕರೆಸಿ ಮನೆಯಲ್ಲಿ ದೇವರಿಗೆ ನೈವೇದ್ಯ, ಕುಂಕುಮಾರ್ಚನೆ ಮಾಡಿ ತಮ್ಮ ಇಷ್ಟಾರ್ಥಗಳು ಹಾಗೂ ಹರಕೆ, ಪೂಜಾಫಲ ಪಡೆಯುತ್ತಾರೆ.

ನೇತೃತ್ವ ವಹಿಸಿ ಮಠದ ಜಾತ್ರೆಯನ್ನು ಮುನ್ನಡೆಸಿಕೊಂಡು ಬರುತ್ತಿರುವ ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಸುಮಾರು ವರ್ಷಗಳಿಂದ ಪುರಾಣ, ಪ್ರವಚನ, ಸಾಮಾಜಿಕ, ಧಾರ್ಮಿಕತೆಯಲ್ಲಿ ಗ್ರಾಮದ ಜನರನ್ನು ಒಟ್ಟುಗೂಡಿಸಿ ಮಾಡುತ್ತಾ ಬಂದಿದ್ದಾರೆ.

ನಮ್ಮ ಗ್ರಾಮದ ಆರಾಧ್ಯ ದೈವ ಸುಖಮುನೇಶ್ವರರು ಪವಾಡ ಪುರುಷರು. ನಮ್ಮ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಮನೆ ಮನಗಳಲ್ಲಿ ನೆಲೆಸಿದ್ದು, ಪ್ರವಾಹ ಪೀಡಿತ ಗ್ರಾಮಗಳಾಗಿದ್ದರೂ ನಮ್ಮನ್ನು ಆಶೀರ್ವದಿಸುತ್ತಾ ಬರುತ್ತಿದ್ದಾರೆ ಗ್ರಾಮದ ಹಿರಿಯರಾದ ನಿಂಗಪ್ಪ ಮೇಟಿ ಹೇಳಿದರು.