ಸಾರಾಂಶ
- ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಲ್ಲಿ ತೀವ್ರ ಪೈಪೋಟಿ । ಬಿಜೆಪಿಯು ಸ್ಪರ್ಧಿಸಿದರೂ ಸಂಖ್ಯಾಬಲದ ಕೊರತೆ
- ಮೇಯರ್ ಸ್ಥಾನ ಬಿಸಿಎಂ ಎ ವರ್ಗಕ್ಕೆ, ಉಪ ಮೇಯರ್ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲು ನಿಗದಿ - - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸಂಖ್ಯಾಬಲ ಇದ್ದಾಗಲೇ ಕಾಂಗ್ರೆಸ್ ತಂತ್ರಗಾರಿಕೆಯಿಂದಾಗಿ ಸಂಖ್ಯಾಬಲ ಕಳೆದುಕೊಂಡ, ಪರಿಶಿಷ್ಟ ಪಂಗಡದ ಸದಸ್ಯ ಇಲ್ಲದ ಕಾರಣಕ್ಕೆ ಮೇಯರ್ ಪಟ್ಟ ಕಳೆದುಕೊಂಡಿತ್ತು ಬಿಜೆಪಿ. ಆದರೆ ಈಗಲೂ, ಸಂಖ್ಯಾಬಲ ಕೊರತೆ ಎದುರಿಸುತ್ತಿರುವ ಬಿಜೆಪಿ ಸೆ.27ರಂದು ಮೇಯರ್- ಉಪ ಮೇಯರ್ ಸ್ಥಾನಗಳಿಗೆ ಸ್ಪರ್ಧಿಸುವ ಉತ್ಸಾಹದಲ್ಲಿದೆ.
ಪಾಲಿಕೆ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಚುನಾವಣಾ ಸಭೆ ನಡೆಯಲಿದೆ. ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಮೇಯರ್-ಉಪ ಮೇಯರ್ ಸ್ಥಾನಗಳು ಒಲಿಯುವುದು ಸ್ಪಷ್ಟವಾಗಿದೆ. ಮೇಯರ್ ಸ್ಥಾನ ಬಿಸಿಎಂ ಎ ವರ್ಗಕ್ಕೆ, ಉಪ ಮೇಯರ್ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿದೆ.ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಪಾಲಿಕೆ, ವಿಧಾನಸಭೆ, ಲೋಕಸಭಾ ಕ್ಷೇತ್ರ ಹೀಗೆ ಒಂದೊಂದನ್ನೇ ಕಳೆದುಕೊಂಡೇ ಬಂದಿದ್ದ ಬಿಜೆಪಿ ಇದೀಗ ಮೇಯರ್-ಉಪ ಮೇಯರ್ ಸ್ಥಾನದ ಚುನಾವಣೆಗೆ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಇದಕ್ಕಾಗಿ ಪೂರ್ವ ತಾಲೀಮು ಎಂಬಂತೆ ಗುರುವಾರ ಸಂಜೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರ ಸಭೆ ಕರೆದಿದ್ದರೂ, ಸಭೆಯಲ್ಲಿ ಜಿಲ್ಲಾ ನಾಯಕರು, ಗೈರಾದ ಸದಸ್ಯರು ಹಾಗೂ ಮೇಯರ್ ಚುನಾವಣೆ ವೇಳೆಯೇ ವಿದೇಶ ಪ್ರವಾಸ ಹೋದ ಸದಸ್ಯರ ಬಗ್ಗೆ ವಾಗ್ದಾಳಿ ನಡೆದಿದೆ ಎನ್ನಲಾಗಿದೆ.
ಮಾಜಿ ಸಚಿವರು, ಮಾಜಿ ಸಂಸದರು ಮಹತ್ವದ ಮೇಯರ್- ಉಪ ಮೇಯರ್ ಚುನಾವಣೆ ಕುರಿತ ಸಭೆಗೆ ಗೈರಾಗಿದ್ದುದು, ಕೆಲ ಸದಸ್ಯರು ಬೇಕಂತಲೇ ಸಭೆಗೆ ಭಾಗವಹಿಸದೇ ಇರುವುದು, ಓರ್ವ ಸದಸ್ಯರು ವಿದೇಶ ಪ್ರವಾಸ ಹೋಗಿರುವುದು ಸಹಜವಾಗಿಯೇ ಅವಕಾಶ ವಂಚಿತ ಸದಸ್ಯರು, ಪಕ್ಷ ನಿಷ್ಠ ಸದಸ್ಯರು, ಮುಖಂಡರ ಕೆಂಗಣ್ಣಿಗೂ ಗುರಿಯಾಗಿದೆ. ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಬಹುತೇಕ ಬಿಜೆಪಿ ಇಬ್ಬರನ್ನು ಕಣಕ್ಕೆ ಇಳಿಸಲಿದೆ. ಅಷ್ಟೇ ಅಲ್ಲ, ಎದುರಾಳಿ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು, ಬಿಜೆಪಿಯಿಂದ ಅಂತರ ಕಾಯ್ದುಕೊಂಡ ತಮ್ಮದೇ ಪಕ್ಷದ ಕೆಲವರನ್ನು ಸಂಪರ್ಕಿಸಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂಬುದಾಗಿ ತಿಳಿದು ಬಂದಿದೆ.- - -
ಬಾಕ್ಸ್ * ಸಚಿವರ ಹಸ್ತಾಕ್ಷರದ ಮುಚ್ಚಿದ ಲಕೋಟೇಲಿ ಅದೃಷ್ಟ! ಅತ್ತ ಕಾಂಗ್ರೆಸ್ ಪಕ್ಷದಲ್ಲಿ ಮೇಯರ್- ಉಪ ಮೇಯರ್ ಸ್ಥಾನಕ್ಕೆ ಯಾರು ಅಭ್ಯರ್ಥಿಗಳು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮೇಯರ್ ಸ್ಥಾನಕ್ಕೆ ಆರೇಳು ಜನ ಆಕಾಂಕ್ಷಿಗಳಿದ್ದಾರೆ. ಮುಖ್ಯವಾಗಿ ಎ.ಬಿ.ರಹೀಂ ಸಾಬ್, ಕೆ.ಚಮನ್ ಸಾಬ್, ಅಬ್ದುಲ್ ಲತೀಫ್ ವಾಲಿಕಾರ್, ಜಾಕೀರ್ ಅಲಿ, ಉರ್ಬಾನ್ ಪಂಡಿತ್ ಹೆಸರು ಕೇಳಿ ಬಂದರೂ, ಪ್ರಮುಖವಾಗಿ 2-3 ಹೆಸರು ಚಾಲ್ತಿಯಲ್ಲಿವೆ. ಉಪ ಮೇಯರ್ ಸ್ಥಾನಕ್ಕೆ ಬಸಾಪುರದ ಶಿವಲೀಲಾ ಕೊಟ್ರಯ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರು ಆಕಾಂಕ್ಷಿ ಆಗಿದ್ದಾರೆ. ಕಾಂಗ್ರೆಸ್ಸಿನಲ್ಲಿ ಎಷ್ಟೇ ಲಾಭಿ, ಪ್ರಯತ್ನ, ಪ್ರಭಾವ ಬೀರಿದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳುವವರಷ್ಟೇ ಅಭ್ಯರ್ಥಿಗಳಾಗುತ್ತಾರೆ.ಮೇಯರ್- ಉಪ ಮೇಯರ್ ಅಭ್ಯರ್ಥಿಗಳು ಯಾರು ಆಗಬೇಕೆಂಬುದನ್ನು ಕಾಂಗ್ರೆಸ್ಸಿನ ಜಿಲ್ಲಾ ಹೈಕಮಾಂಡ್ ಆದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಚರ್ಚಿಸುತ್ತಾರೆ. ಯಾರು ಏನೇ ಚರ್ಚಿಸಿದರೂ ಅಂತಿಮವಾಗಿ ಯಾರ ಹೆಸರಿನ ಲಕೋಟೆಯನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಳಿಸುತ್ತಾರೋ, ಅದೇ ಲಕೋಟೆಯನ್ನು ಚುನಾವಣೆ ದಿನ ಕೆಲವೇ ಗಂಟೆಗಳ ಮೊದಲು ಪಾಲಿಕೆ ಸದಸ್ಯರ ಕೈ ತಲುಪಿದಾಗಲಷ್ಟೇ ಅಭ್ಯರ್ಥಿ ಯಾರೆಂಬ ಸ್ಪಷ್ಟ ಚಿತ್ರಣ ಹೊರ ಬೀಳುತ್ತದೆ. ಬಿಜೆಪಿಯಿಂದ ಬಹುತೇಕ ಬಿಸಿಎಂ ಎ ವರ್ಗಕ್ಕೆ ಸೇರಿದ ಹಾಲಿ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಮೇಯರ್ ಸ್ಥಾನಕ್ಕೆ, ಉಪ ಮೇಯರ್ ಸ್ಥಾನಕ್ಕೆ ಕೆ.ಎಂ.ವೀರೇಶ ಪೈಲ್ವಾನ್ ಸ್ಪರ್ಧಿಸಬಹುದು. ಆದರೆ, ಬಿಜೆಪಿಯಲ್ಲೂ ಯಾವುದೂ ಅಂತಿಮವಾಗಿಲ್ಲ.
ಸದ್ಯಕ್ಕೆ ಕಾಂಗ್ರೆಸ್ ಪಕ್ಷವು ಪಾಲಿಕೆಯಲ್ಲಿ ಸುರಕ್ಷಿತ ವಲಯದಲ್ಲಿದ್ದು, ಸಂಖ್ಯಾ ಬಲದ ಜೊತೆಗೆ ಸಚಿವರು, ಸಂಸದರು, ಶಾಸಕರ ಬಲ ಹೊಂದಿದೆ. ಕಾಂಗ್ರೆಸ್ಸಿನ ಮುಂದೆ ಸದ್ಯಕ್ಕೆ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಸಂಖ್ಯಾಬಲ ಹೊಂದಿಲ್ಲ. ಬಿಜೆಪಿಯಿಂದ ಗೆದ್ದವರೇ ಕಾಂಗ್ರೆಸ್ ಸಖ್ಯ ಬೆಳೆಸಿರುವುದು, ಬಿಜೆಪಿಯ ಮಾಜಿ ಸಚಿವರು, ಮಾಜಿ ಸಂಸದರು ಕಾರಣಾಂತರದಿಂದ ಚುನಾವಣೆ ಮುನ್ನಾ ದಿನದ ಸಭೆಗೆ ಗೈರಾಗಿದ್ದು, ಕೆಲವು ಸದಸ್ಯರು ಸಹ ಸಭೆಗೆ ಹಾಜರಾಗದೇ ಇದ್ದುದು ಕಮಲ ಪಕ್ಷದ ಜಂಘಾಬಲವನ್ನೇ ಅಡಗಿಸಿದೆ. ಸದ್ಯಕ್ಕೆ ಬಿಜೆಪಿ ಸ್ವಯಂಕೃತ ಅಪರಾಧಕ್ಕೆ ಬೆಲೆ ತೆರುವಂತಹ ದುಸ್ಥಿತಿ ತಂದುಕೊಂಡಿದೆ ಎಂಬುದು ಪಕ್ಷದ ನೊಂದ ಕಾರ್ಯಕರ್ತರ ಹೇಳಿಕೆ.- - - -26ಕೆಡಿವಿಜಿ14: ಮಹಾ ನಗರ ಪಾಲಿಕೆ ಕಟ್ಟಡ.