12ನೇ ಶತಮಾನದ ಸಮಾಜ ಸುಧಾರಕ ಮಹಾತ್ಮ ಬಸವೇಶ್ವರರು ಪ್ರತಿಪಾದಿಸಿದ ಇಷ್ಟಲಿಂಗ ಪೂಜೆಯು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮನಸ್ಸನ್ನು ಪರಿಶುದ್ಧಗೊಳಿಸುವ ಹಾಗೂ ತನ್ನೊಳಗಿರುವ ಪರಮಾತ್ಮನನ್ನು ಕಾಣುವ ಶಕ್ತಿಯನ್ನು ಪಡೆದುಕೊಳ್ಳುವ ಮಾರ್ಗವನ್ನು ತೋರಿಸಿಕೊಟ್ಟಿದೆ ಎಂದು ಇಳಕಲ್‍ನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಗುರು ಮಹಾಂತ ಶಿವಯೋಗಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

12ನೇ ಶತಮಾನದ ಸಮಾಜ ಸುಧಾರಕ ಮಹಾತ್ಮ ಬಸವೇಶ್ವರರು ಪ್ರತಿಪಾದಿಸಿದ ಇಷ್ಟಲಿಂಗ ಪೂಜೆಯು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮನಸ್ಸನ್ನು ಪರಿಶುದ್ಧಗೊಳಿಸುವ ಹಾಗೂ ತನ್ನೊಳಗಿರುವ ಪರಮಾತ್ಮನನ್ನು ಕಾಣುವ ಶಕ್ತಿಯನ್ನು ಪಡೆದುಕೊಳ್ಳುವ ಮಾರ್ಗವನ್ನು ತೋರಿಸಿಕೊಟ್ಟಿದೆ ಎಂದು ಇಳಕಲ್‍ನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಗುರು ಮಹಾಂತ ಶಿವಯೋಗಿಗಳು ಹೇಳಿದರು.

ನಗರದ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಡಾ. ಶರಣಬಸವಪ್ಪ ಅಪ್ಪಾ ಅನುಭವ ಮಂಟಪದಲ್ಲಿ ಮಂಗಳವಾರ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂ.ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವ ಮುನ್ನಾದಿನವಾದ ಮಂಗಳವಾರ ಡಾ. ಗುರು ಮಹಾಂತ ಶಿವಯೋಗಿಗಳು ಸಾಮೂಹಿಕ ಇಷ್ಟಲಿಂಗ ಪೂಜೆಗೆ ಚಾಲನೆ ನೀಡಿ ಮಾತಾಡಿದರು.

ಸೆ. 2ರ ಬುಧವಾರ ಡಾ. ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವ ಮಹಾ ಸಂಸ್ಥಾನದಲ್ಲಿ ನಡೆಯುತ್ತಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿಯವರು, ವಿವಿಧ ಕ್ಷೇತ್ರಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಗಣ್ಯರೊಂದಿಗೆ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡರು.

ಇಷ್ಟಲಿಂಗ ಪೂಜೆಯ ಮಹತ್ವ ಹಾಗೂ ಅದರ ಮೂಲಕ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕುತ್ತದೆ. ಮಹಾತ್ಮ ಬಸವೇಶ್ವರರು ಪ್ರತಿಪಾದಿಸಿದ ಇಷ್ಟಲಿಂಗವು ಮನಸ್ಸನ್ನು ಏಕಾಗ್ರಗೊಳಿಸಿ ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೇವರನ್ನು ಕಾಣುವ ದೃಷ್ಟಿಯನ್ನು ನೀಡುತ್ತದೆ ಎಂದು ಶಿವಯೋಗಿಗಳು ಹೇಳಿದರು.

ದೇವರನ್ನು ಅನುಭವಿಸಿದವರು ತಮ್ಮ ಅನುಭವಕ್ಕೆ ತಕ್ಕಂತೆ ಆತನಿಗೆ ವಿವಿಧ ಹೆಸರು ಹಾಗೂ ರೂಪಗಳನ್ನು ನೀಡಿದ್ದಾರೆ. ಆದರೆ ಅಗೋಚರ ಹಾಗೂ ಸರ್ವಶಕ್ತನಾದ ಆ ಪರಮಾತ್ಮನಿಗೆ ಮಹಾತ್ಮ ಬಸವೇಶ್ವರರು ‘ಲಿಂಗ’ ಎಂಬ ಹೆಸರನ್ನು ನೀಡಿದ್ದಾರೆಂದರು.

ಇಷ್ಟಲಿಂಗ ಪೂಜೆಯು ಲಿಂಗಾಯತ ಹಾಗೂ ವೀರಶೈವ ಸಮುದಾಯದ ಅವಿಭಾಜ್ಯ ಅಂಗ, ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಆಯೋಜಿಸುವ ಮೂಲಕ ಜನರಲ್ಲಿ ಇಷ್ಟಲಿಂಗ ಪೂಜೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿರುವ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರನ್ನು ಶಿವಯೋಗಿಗಳು ಶ್ಲಾಘಿಸಿದರು.

ಪೂಜ್ಯ ಶಿವಯೋಗಿಗಳೊಂದಿಗೆ ವೇದಿಕೆಯನ್ನು ಹಂಚಿಕೊಂಡ ಪ್ರಮುಖ ಸ್ವಾಮೀಜಿಗಳಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಅಫಜಲಪುರ ತಾಲೂಕಿನ ಚಿನ್ಮಯಗಿರಿ ಮಠ, ಚಿಣಮಗೇರಾದ ಪೂಜ್ಯ ವೀರ ಮಹಾಂತ ಶಿವಾಚಾರ್ಯರು, ಆಳಂದದ ಶ್ರೀ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೆಶ್ವರ ಸ್ವಾಮೀಜಿ, ಕಲಬುರಗಿ ಜಿಲ್ಲೆಯ ಟೆಂಗಳಿ ಕಾಳಗಿಯ ಶಾಂತೇಶ್ವರ ಹಿರೇಮಠದ ಪೂಜ್ಯ ಡಾ. ಶಾಂತ ಸೋಮಾನಾಥ ಶಿವಾಚಾರ್ಯರು, ನರೋಣದ ಮಹಾಂತೇಶ್ವರ ಮಠದ ಪೂಜ್ಯ ಡಾ. ಗುರು ಮಹಾಂತ ಶಿವಯೋಗಿಗಳು, ಮಾದನಹಿಪ್ಪರಗಾದ ಶಿವಲಿಂಗೇಶ್ವರ ವಿರಕ್ತ ಮಠದ ಪೂಜ್ಯ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಕಲಬುರಗಿಯ ಗದ್ದಿಗಿಮಠದ ಪೂಜ್ಯ ಚರಲಿಂಗ ಮಹಾಸ್ವಾಮಿಗಳು, ಮಹಾಗಾಂವ್ ಕಳ್ಳಿಮಠದ ಪೂಜ್ಯ ಶ್ರೀ ವಿರುಪಾಕ್ಷ ದೇವರು, ಸುಂಟನೂರಿನ ಸಂಸ್ಥಾನ ಹಿರೇಮಠದ ಪೂಜ್ಯ ಬಂಡಯ್ಯ ಶಾಸ್ತ್ರಿಗಳು ಹಾಗೂ ಕಲಬುರಗಿ ಜಿಲ್ಲೆಯ ಪಾಳಾದ ಕಟ್ಟಿಹಿರೇಮಠದ ಪೂಜ್ಯ ಡಾ. ಗುರುಮೂರ್ತಿ ಶಿವಾಚಾರ್ಯರು ಉಪಸ್ಥಿತರಿದ್ದರು.

ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಹೋದರಿಯರಾದ ಶಿವಾನಿ, ಭವಾನಿ , ಮಹೇಶ್ವರಿ, ಡಾ. ಗಂಗಾಂಬಿಕಾ ನಿಷ್ಠಿ, ಗೋದಾವರಿ ಭೀಮಳ್ಳಿ, ಡಾ. ಅಲ್ಲಮಪ್ರಭು ದೇಶಮುಖ, ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಡಾ. ಜಯಶ್ರೀ ದಂಡೆ, ಭಾಗ್ಯಶ್ರೀ ಎಸ್. ಪಾಟೀಲ್, ಸಂತೋಷಿ ರಾಣಿ ತೇಲ್ಕೂರ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಸೇರಿದಂತೆ ಪೂಜ್ಯ ಡಾ. ಅಪ್ಪಾಜಿಯವರ ಕುಟುಂಬ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.