ಇಂದು ಅರ್ಧ ಬೆಂಗಳೂರಿಗೆ ನೀರಿಲ್ಲ

| Published : Feb 27 2024, 01:33 AM IST

ಸಾರಾಂಶ

ದುರಸ್ತಿ ಕಾರ್ಯಕ್ಕಾಗಿ ಜಲ ಮಂಡಳಿಯು ಇಂದು ಮತ್ತು ನಾಳೆ ಬೆಂಗಳೂರಿನ ಬಹುತೇಕ ಕಡೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೇಸಿಗೆ ಆರಂಭದಲ್ಲಿಯೇ ನಗರದ ಹಲವೆಡೆ ನೀರಿನ ಸಮಸ್ಯೆ ಎದುರಾಗಿದ್ದು, ಜನರು ನೀರಿಗಾಗಿ ಪರದಾಡುವಂತಾಗಿದೆ. ಅದರ ನಡುವೆಯೇ ಜಲಮಂಡಳಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದ್ದು, ಅದರಿಂದಾಗಿ ಫೆ.27 ಮತ್ತು 28ರಂದು ಸರಿಸುಮಾರು ಅರ್ಧ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಳಿಸುತ್ತಿದೆ.

ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಸೇರಿ ಇನ್ನಿತರ ಕಾರಣಗಳಿಂದಾಗಿ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣಿಸುತ್ತಿದೆ. ಅದರಲ್ಲೂ ಯಲಹಂಕ, ಮಹದೇವಪುರ, ಕೆ.ಆರ್‌.ಪುರ ಸೇರಿದಂತೆ ಹಲವು ಭಾಗಗಳಲ್ಲಿ ನೀರಿನ ವ್ಯತ್ಯಯವುಂಟಾಗಿದ್ದು, ಜನರು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. ಅದರ ನಡುವೆಯೇ ಮಂಗಳವಾರ ಮತ್ತು ಬುಧವಾರ ಜಲಮಂಡಳಿ ಕಾವೇರಿ 2 ಮತ್ತು 4ನೇ ಹಂತ ವ್ಯಾಪ್ತಿಯ ಬಡಾವಣೆಗಳಿಗೆ ನೀರಿನ ಪೂರೈಕೆ ಸ್ಥಗಿತಗೊಳಿಸುತ್ತಿದೆ.

ಈ ದಿನಗಳಲ್ಲಿ ಕಾವೇರಿ 2 ಮತ್ತು 4ನೇ ಹಂತದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಾಗೂ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ (ಯುಎಫ್‌ಡಬ್ಲ್ಯೂ)ದ ಮಾಹಿತಿ ಪಡೆಯಲು ಬಲ್ಕ್‌ ಮೀಟರ್‌ ಅಳವಡಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರ್ಧಕ್ಕೂ ಹೆಚ್ಚಿನ ಬಡಾವಣೆಗಳಿಗೆ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಹಾಗೂ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಕಾವೇರಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.