ಗುದ್ನೇಶ್ವರನ ಪಂಚ ಕಳಸ ರಥೋತ್ಸವಕ್ಕೆ ಐತಿಹಾಸಿಕ ಭವ್ಯ ಪರಂಪರೆ ಇದೆ. ಕುಕನೂರಿನ ಪೂರ್ವಕ್ಕೆ ಇರುವ ಗುದ್ನೇಪ್ಪನಮಠ ನಾಡಿನಲ್ಲಿಯೇ ಬಹು ವಿಶಿಷ್ಟ ಸ್ಥಳ

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಪಟ್ಟಣದ ಗುದ್ನೇಪ್ಪನಮಠದ ಶ್ರೀಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ಡಿ.4, ಗುರುವಾರ ಸಂಜೆ 4.30ಕ್ಕೆ ಜರುಗಲಿದೆ.

ಜಾತ್ರೆ ದಿನ ಪ್ರತಿಯೊಬ್ಬರೂ ಮಾದಲಿ, ಸಜ್ಜಿ ರೊಟ್ಟಿ, ಗುರೆಳ್ಳು ಚಟ್ನಿ, ಶೆಂಗಾ ಚಟ್ನಿ ಮಾಡಿ ನೈವೇದ್ಯ ಅರ್ಪಿಸುತ್ತಾರೆ.

ಗುದ್ನೇಶ್ವರನ ಪಂಚ ಕಳಸ ರಥೋತ್ಸವಕ್ಕೆ ಐತಿಹಾಸಿಕ ಭವ್ಯ ಪರಂಪರೆ ಇದೆ. ಕುಕನೂರಿನ ಪೂರ್ವಕ್ಕೆ ಇರುವ ಗುದ್ನೇಪ್ಪನಮಠ ನಾಡಿನಲ್ಲಿಯೇ ಬಹು ವಿಶಿಷ್ಟ ಸ್ಥಳ, ಪಂಚಕಳಸ ಹೊಂದಿರುವಂತಹ ವೈಶಿಷ್ಟ್ಯತೆ ಇಲ್ಲಿದೆ. ಸಾಮಾನ್ಯವಾಗಿ ಎಲ್ಲ ರಥಗಳಿಗೆ ಒಂದೇ ಕಳಸ ಇರುವುದು ವಾಡಿಕೆ. ಆದರೆ ಈ ಗುದ್ನೇಶ್ವರನ ರಥಕ್ಕೆ ಐದು ಕಳಸಗಳಿರುವುದು ವಿಶೇಷ.

ಗುದ್ನೇಪ್ಪನಮಠದ ದೈವ ರುದ್ರಮುನೀಶ್ವರ ಜನ ವಾಡಿಕೆಯಲ್ಲಿ ಗುದ್ನೇಶ್ವರನೆಂದೇ ಖ್ಯಾತಿ, ರುದ್ರ ಮುನೀಶ್ವರರು ತಮ್ಮ ಲಿಂಗಲೀಲಾ ಶಕ್ತಿಯಿಂದ ಜನರ ಕಷ್ಟ ದೂರೀಕರಿಸಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ರೇವಣಸಿದ್ದ ಹಾಗೂ ಸುಂದರನಾಚಿ ರುದ್ರಮುನೀಶ್ವರರ ತಂದೆ-ತಾಯಿ. ಕಾಂಚಿಪುರದಿಂದ ಸಂಚಾರಗೈಯುತ್ತ ಮಂಗಳವಾಡೆಗೆ ಆಗಮಿಸಿದ ದಂಪತಿಗಳು ಈ ನಾಡಿನ ಜನರ ಸುಖ-ದುಃಖಗಳಿಗೆ ಸ್ಪಂದಿಸಿ ಸಹಕಾರ ಸಹಾಯ ನೀಡುತ್ತಾರೆ. ಮೂರು ತಿಂಗಳು ಗರ್ಭಿಣಿಯಾಗಿದ್ದ ಸುಂದರ ನಾಚಿ ತವರು ಮನೆಗೆ ಹೋಗುವ ಅಭಿಲಾಷೆ ವ್ಯಕ್ತಪಡಿಸಿದಾಗ ರೇವಣಸಿದ್ದರು ತಮ್ಮ ಶಿವಯೋಗ ಶಕ್ತಿಯಿಂದ ಗರ್ಭದ ಕೂಸನ್ನು ಹೊರ ತೆಗೆದು ಭೂಮಿಯಲ್ಲಿ ಹೂಳಿಸುತ್ತಾರೆ. ಒಂಬತ್ತು ತಿಂಗಳು ತರುವಾಯ ಭೂಮಿಯಿಂದ ಹೊರ ತೆಗೆಸಿದಾಗ ಮಗು ಬೆಳದಿರುತ್ತದೆ.

ಪ್ರನಾಳ ಶಿಶುವಿನ ಪ್ರಯೋಗದಂತೆ ಕೂಸು ಜನನವಾಯಿತು. ಮಗುವಿಗೆ ರುದ್ರ ಮುನೀಶ್ವರ ಎಂದು ನಾಮಕರಣ ಮಾಡಿದ ಎಂದು ಐತಿಹ್ಯ ಸಾರುತ್ತದೆ.

ರೇವಣಸಿದ್ದರ ಆರೈಕೆಯೊಂದಿಗೆ ರಂಭಾಪುರಿಯಲ್ಲಿ ಬೆಳೆದ ರುದ್ರಮುನೀಶ್ವರ ಅಕ್ಷರಾಭ್ಯಾಸದಲ್ಲಿ ಪಾರಂಗತನಾಗಿ ದೇಶ ಸಂಚಾರಗೈಯುತ್ತ ಕಲ್ಯಾಣಕ್ಕೆ ಆಗಮಿಸಿದನು. ಶರಣ ಸಂದೋಹದಲ್ಲಿ ಸಮ್ಮೇಳತಗೊಂಡ ರುದ್ರಮುನಿಸ್ವಾಮಿ ಮಹಿಮಾ ಪುರುಷನಾದನು.

ಕುಕನೂರಿನ ಆಸ್ಥಾನಿಕರು ಕೊಡ ಮಾಡಿದ ಸಮಾರು 500ಎಕರೆ ಭೂಮಿಯಲ್ಲಿ ಸದಾಕಾಲ ಫಸಲನ್ನು ಕೊಡುವಂತಹ ಹುಣಸೆ ಬೀಜ ಬಿತ್ತನೆ ಆರಂಭಿಸಿದರು. ಸ್ಥಳೀಯ ರಾಜನ ಆಸ್ಥಾನಿಕರ ಕರೆಯ ಮೇರೆಗೆ ಬಿತ್ತುವ ಕಾರ್ಯ ನಿಲ್ಲಿಸಿ ತಮ್ಮ ಕಾಯಕಕ್ಕೆ ಚ್ಯುತಿ ಬಂದುದಕ್ಕಾಗಿ ಲಿಂಗ ಪೂಜೆ ಗೈಯ್ಯುತ್ತಾ ಆ ಲಿಂಗದ ಬೆಳಕಿನಲ್ಲಿಯೇ ಬೆಳಗಾದರು. ತಾವು ಲಿಂಗ ಪೂಜೆಗೈಯುತ್ತಾ ರುದ್ರಮುನಿಸ್ವಾಮಿ ಗುದ್ದಿನಲ್ಲಿಯೇ ಲಿಂಗೈಕ್ಯರಾಗಿದ್ದರಿಂದ ಗುದ್ನೇಶ್ವರನೆಂದು ಕರೆಯಲಾರಂಭಿಸಿದರು. ಅಲ್ಲದೆ ಸ್ವಾಮಿಯು ಸರ್ಪದ ರೂಪದಲ್ಲಿ ಸದಾ ಇಲ್ಲಿಯೇ ನೆಲೆಸಿದ್ದಾನೆ ಎನ್ನುವ ನಂಬಿಕೆ ಜನಮಾನಸದಲ್ಲಿದೆ.

ರುದ್ರಮುನೀಶ್ವರ ಸ್ವಾಮಿ ಬಿತ್ತನೆಗಾಗಿ ಬಳಸಿದ ಎತ್ತುಗಳು, ಕೂರಿಗೆಯ ಶೆಡ್ಡಿ, ಬಣವೆ ಎಲ್ಲವೂ ಶಿಲೆಯ ರೂಪ ಹೊಂದಿವೆ. ಈಗಲೂ ಜೋಡು ಬಸವಣ್ಣನ ಗುಡಿ, ಕಲ್ಲಿನ ಬಣವೆ ನೋಡಬಹುದಾಗಿದೆ. ಶ್ರದ್ಧೆಯಿಂದ ನಡೆದುಕೊಂಡರೆ ಭಕ್ತರ ಇಷ್ಟಾರ್ಥಗಳು ಪೂರೈಸುತ್ತವೆ ಎಂಬ ನಂಬಿಕೆ ಇದೆ. ವಿಶೇಷವೆಂದರೆ ಮದುವೆಯಾದ ನವದಂಪತಿಗಳು ಮದುವೆಯ ಮೊದಲ ವರ್ಷ ಗುದ್ನೇಶ್ವರ ಪಂಚಕಳಸ ರಥೋತ್ಸವ ನೋಡಬೇಕೆಂಬ ವಾಡಿಕೆ ಸಹ ಇದೆ.

ಮಹಾಪ್ರಸಾದ:

ಗುದ್ನೇಶ್ವರ ರಥೋತ್ಸವ ಪ್ರಯುಕ್ತ ಗುದ್ನೇಪ್ಪನಮಠ ನೀಲಗುಂದದ ಮಠದಲ್ಲಿ ಐದು ದಿನಗಳ ಕಾಲ ಮಹಾಪ್ರಸಾದ ಜರುಗಲಿದೆ.

ಗುದ್ನೇಪ್ಪನಮಠದ ಜಾತ್ರೆಗೆ ಪೂರ್ವ ಕಾಲದಿಂದಲೂ ಧಾರ್ಮಿಕ ನಂಬಿಕೆಯ ಶಕ್ತಿ ಇದೆ. ಗುದ್ದೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ನಾಡಿನಲ್ಲಿಯೇ ವಿಶಿಷ್ಟವಾದದ್ದು. ಹಲವಾರು ಕಡೆಗಳಿಂದ ಅಪಾರ ಭಕ್ತ ಸಮೂಹ ಜಾತ್ರೆಗೆ ಆಗಮಿಸುತ್ತದೆ. ಶ್ರದ್ಧಾಭಕ್ತಿಯಿಂದ ಬೇಡಿದರೆ ಗುದ್ನೇಶ್ವರಸ್ವಾಮಿ ಇಷ್ಟಾರ್ಥ ಕಲ್ಪಿಸುತ್ತಾನೆ ಎಂದು ಗುದ್ದೇಪ್ಪನಮಠದ ಶ್ರೀಪ್ರಭುಲಿಂಗ ದೇವರು ತಿಳಿಸಿದ್ದಾರೆ.

ಗುದ್ನೇಶ್ವರಸ್ವಾಮಿಯು ಈ ಭಾಗದ ಆರಾಧ್ಯ ದೈವ. ಪಂಚಕಳಸ ಮಹಾರಥೋತ್ಸವ ನಾಡಿನಲ್ಲಿಯೇ ವಿಶೇಷವಾಗಿದೆ. ಅಲ್ಲದೆ ಗುದ್ನೇಪ್ಪನಮಠದಲ್ಲಿ ಹೆಮ್ಮರವಾಗಿ ಬೆಳೆದಿರುವ ಹುಣಸೆ ಮರಗಳು ಸ್ವಾಮಿಯ ಶಕ್ತಿ ಸಾರುತ್ತವೆ. ಗುದ್ನೇಶ್ವರ ರಥೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಮಹಾಪ್ರಸಾದ ಸಹ ಜರುಗಲಿದೆ ಎಂದು ಗುದ್ನೇಪ್ಪನಮಠದ ಶರಣಯ್ಯ ಸಿದ್ದಲಿಂಗಯ್ಯ ಹಳೆಮನಿ ಹೇಳಿದ್ದಾರೆ.