ಇಂದು ಹದಲಿ ವೀರಭದ್ರೇಶ್ವರ ರಥೋತ್ಸವ

| Published : May 23 2024, 01:02 AM IST

ಸಾರಾಂಶ

ಗ್ರಾಮಸ್ಥರೆಲ್ಲರೂ ಆಭರಣದ ಪೆಟ್ಟಿಗೆಗಳ ಮೆರವಣಿಗೆ ಮಾಡಿ ಶ್ರೀವೀರಭದ್ರೇಶ್ವರ ದೇವರಿಗೆ ಅಲಂಕಾರ

ನರಗುಂದ: ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಹದಲಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ 41 ಅಡಿ ಎತ್ತರದ ನೂತನ ರಥೋತ್ಸವ ಮೇ 23 ಗುರುವಾರದಂದು ವಿಜೃಂಭಣೆಯಿಂದ ಜರುಗಲಿದೆ.

ತಹಸೀಲ್ದಾರ ಉಪ ಖಜಾನೆಯಲ್ಲಿ ಹದಲಿ ಗ್ರಾಮದ ವೀರಭದ್ರ ದೇವಸ್ಥಾನಕ್ಕೆ ಸಂಬಂಧಿಸಿದ ಪುರಾತನ ಕಾಲದ ಎರಡು ಪೆಟ್ಟಿಗೆಗಳಿದ್ದು, ಇದೇ ಸಂದರ್ಭದಲ್ಲಿ ಅವುಗಳನ್ನು ತಹಸೀಲ್ದಾರ ಶ್ರೀಶೈಲ ತಳವಾರ ಗ್ರಾಮದ ಗುರುಹಿರಿಯರಿಗೆ ನೀಡಲಿದ್ದಾರೆ.

ಗ್ರಾಮಸ್ಥರೆಲ್ಲರೂ ಆಭರಣದ ಪೆಟ್ಟಿಗೆಗಳ ಮೆರವಣಿಗೆ ಮಾಡಿ ಶ್ರೀವೀರಭದ್ರೇಶ್ವರ ದೇವರಿಗೆ ಅಲಂಕಾರ ಮಾಡಲಿದ್ದಾರೆ. ಆ ಎರಡು ಪೆಟ್ಟಿಗೆಗಳಲ್ಲಿ ಒಂದರಲ್ಲಿ ತ್ರಿಮೂರ್ತಿ, ಗ್ರಾಮದೇವತೆ ಮುಖ, ವೀರಭದ್ರ ಮುಖ, ಚಾಮರ ಹಿಡಿಕೆ, ಬೆಳ್ಳಿ ಪೈಪ್‌, ತಾಳಿ, ಬಂಗಾರದ ಪದಕ ಮತ್ತು ಗುಂಡ ಇವೆ. ಮತ್ತೊಂದು ಪೆಟ್ಟಿಗೆಯಲ್ಲಿ ಸಣ್ಣ ಕಿರೀಟ 4, ದೊಡ್ಡ ಕಿರೀಟ 1, ಚೌರ, ಸಣ್ಣ ಪಾದುಕೆ 2, ದೊಡ್ಡ ಪಾದುಕೆ 2, ಕೈ ಕತ್ತಿ, ಓಲೆ, ಕಿವಿ ಓಲೆ, ಕೆಂಪು ಹವಳದ ಸರ (ಬಂಗಾರದ), ಹಣೆಪಟ್ಟಿ, ನಡಪಟ್ಟಿ, ಗುಂಡಗಡಿಗೆ, ಬಸವಣ್ಣನ ಮುಖ ಮತ್ತು ಕೊರಳ ಪಟ್ಟಿ ಇದೆ.

ಜಾತ್ರೆಯ ನಿಮಿತ್ತ ಸಿಪಿಐ ಮಂಜುನಾಥ ನಡುವಿನಮನಿ ಹದಲಿ ಗ್ರಾಮಕ್ಕೆ ಭೇಟಿ ನೀಡಿ, ದೇವಸ್ಥಾನದ ಟ್ರಸ್ಟ್ ಕಮೀಟಿ ಸದಸ್ಯರು ಮತ್ತು ಗ್ರಾಮದ ಗುರುಹಿರಿಯರನ್ನು ಕರೆದು ರಥೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಎಲ್ಲರೂ ಎಚ್ಚರ ವಹಿಸಬೇಕು. ಇತ್ತೀಚೆಗೆ ರಾಜ್ಯದ ಅನೇಕ ಕಡೆಗಳಲ್ಲಿ ರಥೋತ್ಸವದ ಸಂದರ್ಭ ಅನೇಕ ಅವಘಡಗಳು ಸಂಭವಿಸಿವೆ. ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ರಥೋತ್ಸವ ಚೆನ್ನಾಗಿ ನಡೆಯುವಂತೆ ಜನರ ಸುರಕ್ಷತೆ ಮತ್ತು ಜಾತ್ರೆ ಯಶಸ್ಸಿನ ದೃಷ್ಟಿಯಿಂದ 20 ಕ್ಕೂ ಹೆಚ್ಚು ಜನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ನೂತನ ರಥ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ಶಿಲ್ಪಿ ಮೌನೇಶ ಪತ್ತಾರ ನಿರ್ಮಿಸಿದ ನೂತನ ಶ್ರೀ ವೀರಭದ್ರೇಶ್ವರ ರಥವು 41 ಅಡಿ ಎತ್ತರವಿದ್ದು, 18 ಟನ್ ತೂಕವುಳ್ಳದ್ದಾಗಿದ್ದು, ನವಭೃಂಗಿ, ಹರಕೆಸಿಂಹ ಆಕೃತಿಯ ಅಷ್ಟಮೂಲಿ ಬ್ರಹ್ಮ ರಥವನ್ನು ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ದೇವಸ್ಥಾನದ ಸುತ್ತಮುತ್ತಲಿನ ಎಲ್ಲ ರಸ್ತೆ ಮತ್ತು ಚರಂಡಿಗಳನ್ನು ಗ್ರಾಮದ ಯುವಕ ಸಂಘದ ಯುವಕರೇ ಸ್ವಚ್ಚಗೊಳಿಸಿದ್ದಾರೆ. ನಿತ್ಯವೂ ಪ್ರವಚನದ ನಂತರ ಇಡೀ ಗ್ರಾಮದ ಜನತೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಆವರಣ‌ ಮತ್ತು ರಸ್ತೆಯ ಹೊರಗಡೆ ಯಾವುದೇ ಘಟನೆಗಳು ಜರುಗದಂತೆ ಸುರಕ್ಷತೆ ದೃಷ್ಟಿಯಿಂದ ದೇವಸ್ಥಾನಕ್ಕೆ 6 ಸಿಸಿ ಕ್ಯಾಮೇರಾ ಅಳವಡಿಸಲಾಗಿದೆ.

ಮೇ 23ರ ಗುರುವಾರ ಬೆಳಗ್ಗೆ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ನಡೆಯಲಿದೆ. ಸಂಜೆ 5 ಗಂಟೆಗೆ ನೂತನ ರಥೋತ್ಸವ ಜರುಗಲಿದೆ, ಸಂಜೆ 8 ಗಂಟೆಗೆ ಧಮ೯ ಸಭೆ ನಡೆಯಲಿದೆ.

ಪ್ರಥಮ ಬಾರಿಗೆ ದೇವರ ಮೂರ್ತಿಗಳ ಪ್ರಾಚೀನ ಆಭರಣಗಳು ನಮ್ಮ ದೇವಸ್ಥಾನಕ್ಕೆ ಬಂದಿವೆ. ನೂತನ ರಥ ಸಿದ್ಧಗೊಂಡಿದ್ದು. ಜಾತ್ರೆ ಚೆನ್ನಾಗಿ ನಡೆಯಲು ಗ್ರಾಮದ ಎಲ್ಲ ಗುರು ಹಿರಿಯರು, ಯುವಕ ಸಂಘದ ಯುವಕರು ನಿರಂತರ ಸೇವಾ ಕಾರ್ಯ ಮಾಡಿದ್ದರಿಂದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ ಎಂದು ಗುತ್ತಿಗೆದಾರ ರಾಜುಗೌಡ ಪಾಟೀಲ್, ಭೀಮಶಿ ಯಾವಗಲ್ ಹೇಳಿದರು.