ಸಾರಾಂಶ
ಧಾರವಾಡ:
ಶ್ರೀರಾಮನವಮಿ ಮುಗಿದ ಕೆಲವೇ ದಿನಗಳಲ್ಲಿ ಏ. 23ರ ಮಂಗಳವಾರ ಅದ್ಧೂರಿಯಾಗಿ, ಭಕ್ತಿಪೂರ್ಣವಾಗಿ ಹನುಮ ಜಯಂತಿ ಆಚರಣೆಗೆ ಆಂಜನೇಯನ ಭಕ್ತರು ಸಿದ್ಧರಾಗಿದ್ದಾರೆ.ಮಂಗಳವಾರ ಹನುಮ ಜಯಂತಿ ನಿಮಿತ್ತ ಎಲ್ಲ ಹನುಮಂತನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ತೊಟ್ಟಿಲೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಗಳಿವೆ. ಅದರಲ್ಲೂ ಪ್ರತಿಷ್ಠಿತ ನುಗ್ಗಿಕೇರಿ ದೇವಸ್ಥಾನದಲ್ಲಿ ದೇವರಿಗೆ ಹಲವು ವಿಶೇಷ ಪೂಜೆ ಮತ್ತು ರಥೋತ್ಸವ ಜರುಗಲಿದೆ. ಕೆಲವು ಊರುಗಳ ಹನುಮ ಜಯಂತಿಯಂದೇ ರಥೋತ್ಸವಗಳೂ ಇವೆ. ನಗರದ ಕಾಮನಕಟ್ಟಿ ಹನುಮಂತ ದೇವಸ್ಥಾನದಲ್ಲಿ ಬೆಳಗ್ಗೆ ಅಭಿಷೇಕ, ತೊಟ್ಟಿಲ ಸೇವೆ, ಪವಮಾನ ಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಹಾಗೆಯೇ, ನಗರದ ಖ್ಯಾತ ಲೈನ್ ಬಜಾರ್ ಹನುಮಪ್ಪನ ದೇವಸ್ಥಾನವಂತೂ ಅಲಂಕೃತಗೊಂಡಿದ್ದು ಭಕ್ತರನ್ನು ಸೆಳೆದಿದೆ. ದೇವಸ್ಥಾನ ವಿಶ್ವಸ್ಥ ಮಂಡಳಿಯು ಸಕಲ ಸಿದ್ಧತೆ ಕೈಗೊಂಡಿದ್ದು ಜಯಂತಿ ಹಾಗೂ ಮಹಾರಥೋತ್ಸವ ನಡೆಯಲಿದೆ. ಮುಂಜಾನೆ 6.15ಕ್ಕೆ ಹನುಮಂತ ದೇವರ ತೊಟ್ಟಿಲು ಉತ್ಸವ, ಮಧ್ಯಾಹ್ನ 12ರಿಂದ 3.30ರ ವರೆಗೆ ಅನ್ನ ಸಂತರ್ಪಣೆ, ಸಂಜೆ 4ರಿಂದ 55ನೇ ವರ್ಷದ ಮಹಾ ರಥೋತ್ಸವ ವಿಜಂಭಣೆಯಿಂದ ಜರುಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರವೀಣ ಲಾಂಡೆ ಮಾಹಿತಿ ನೀಡಿದ್ದಾರೆ.
ಯಾದವಾಡ ಜಾತ್ರೆ:ತಾಲೂಕಿನ ಯಾದವಾಡ ಗ್ರಾಮದಲ್ಲಿ ಹನುಮ ಜಯಂತಿ ನಿಮಿತ್ತ ಏ. 19ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಿವೆ. ಈಗಾಗಲೇ ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯ ಮುಗಿದಿದ್ದು, ಸೋಮವಾರ ಇಡೀ ರಾತ್ರಿ ಭಜನೆ ಹಾಗೂ ಜಾಗರಣೆ ನಡೆಯಿತು. ಏ. 23ರಂದು ಬೆಳಗ್ಗೆ ಹನುಮಂತ ದೇವರ ಅಭಿಷೇಕ ಹಾಗೂ ತೊಟ್ಟಿಲು ಸೇವೆ, ಕಳಸಾರೋಹಣ ಜರುಗಲಿದೆ. 10ಕ್ಕೆ ಗ್ರಾಮದಲ್ಲಿ ಹನುಮಂತ ದೇವರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಅನ್ನ ಪ್ರಸಾದ ಇರಲಿದ್ದು ಸಂಜೆ 5ಕ್ಕೆ ರಥೋತ್ಸವ ಜರುಗಲಿದೆ. ಏ. 24ರಂದು ರಾತ್ರಿ 8ಕ್ಕೆ ಶ್ರವಣಕುಮಾರ ಸ್ವಾಮೀಜಿ ಅವರಿಂದ ಪ್ರವಚನ, ಏ. 25ರಂದು ಗ್ರಾಮದಲ್ಲಿ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸುವುದು ಹಾಗೂ ಏ. 27ರಂದು ಸಂಜೆ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
;Resize=(128,128))
;Resize=(128,128))
;Resize=(128,128))
;Resize=(128,128))