ಭಾವೈಕ್ಯತೆ ಆಚರಣೆಯ ಜಮಾಲಶಾವಲಿ ಉರೂಸ್‌ ಇಂದು

| Published : Feb 27 2024, 01:31 AM IST

ಭಾವೈಕ್ಯತೆ ಆಚರಣೆಯ ಜಮಾಲಶಾವಲಿ ಉರೂಸ್‌ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷ ಇಲ್ಲಿಯ ತೋಂಟದಾರ್ಯ ಮಠದ ಜಾತ್ರೆ ಬಳಿಕ ನಡೆಯುವ ಸೂಫಿ ಸಂತ ಹಜರತ್‌ ಜಮಾಲ ಶಾವಲಿ ಶರಣರ ಉರೂಸ್‌ಗೆ ಸೋಮವಾರ ಗಂಧದೊಂದಿಗೆ ಚಾಲನೆ ದೊರೆತಿದೆ. ಫೆ. 27ರಂದು ನಡೆಯುವ ಉತ್ಸವವು ಸರ್ವಧರ್ಮಿಯರ ಭಾವೈಕ್ಯತೆಯ ಪ್ರತೀಕವಾಗಿದೆ.

ರಿಯಾಜಹಮ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಪ್ರತಿ ವರ್ಷ ಇಲ್ಲಿಯ ತೋಂಟದಾರ್ಯ ಮಠದ ಜಾತ್ರೆ ಬಳಿಕ ನಡೆಯುವ ಸೂಫಿ ಸಂತ ಹಜರತ್‌ ಜಮಾಲ ಶಾವಲಿ ಶರಣರ ಉರೂಸ್‌ಗೆ ಸೋಮವಾರ ಗಂಧದೊಂದಿಗೆ ಚಾಲನೆ ದೊರೆತಿದೆ. ಫೆ. 27ರಂದು ನಡೆಯುವ ಉತ್ಸವವು ಸರ್ವಧರ್ಮಿಯರ ಭಾವೈಕ್ಯತೆಯ ಪ್ರತೀಕವಾಗಿದೆ.

ಹಜರತ್‌ ಜಮಾಲಶಾವಲಿ ಶರಣರು ಧರ್ಮದ ಗಡಿಯನ್ನು ದಾಟಿ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಚಿಂತನೆ ನಡೆಸಿದರು. ಲೋಕ ಸಂಚಾರ ಮಾಡಿ ತಾವು ಕಂಡ ಜ್ಞಾನವನ್ನು ಸರಳವಾಗಿ ಪ್ರಸಾರ ಮಾಡಿದರು.

ಗ್ರಾಮದಲ್ಲಿ ಎಲ್ಲಾ ಸಮೂಹದ ರೈತಾಪಿ ವರ್ಗ ಉರೂಸ್‌ ದಿನ ತಮ್ಮ ಎತ್ತುಗಳನ್ನು ಶೃಂಗರಿಸಿಕೊಂಡು ಹಲವು ವಾದ್ಯಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದರಗಾದ ಸುತ್ತ ಐದು ಬಾರಿ ಸುತ್ತು ಹಾಕಿಸಿ ಸಕ್ಕರೆ ನೈವೇದ್ಯ ಮಾಡಿಸುತ್ತಾರೆ. ಹರಕೆ ಈಡೇರಿದ ಭಕ್ತರು ಬೆಳ್ಳಿಯ ಕುದುರೆ, ಅಕ್ಕಿ, ಸಕ್ಕರೆಯನ್ನು ಸಮರ್ಪಿಸುತ್ತಾರೆ.

ಎತ್ತುಗಳ ಆರೋಗ್ಯ ಕ್ಷೀಣಿಸಿದರೆ ರೈತರು ಜಮಾಲಶಾವಲಿ ಶರಣರ ದರ್ಗಾಕ್ಕೆ ಬಂದು ಭಕ್ತಿ ಸಮರ್ಪಿಸುತ್ತಾರೆ.ಅವಿನಾಭಾವ ಸಂಬಂಧ: ಉರೂಸ್‌ ದಿನದಂದು ಜರುಗುವ ಅನ್ನಸಂತರ್ಪಣೆಗೆ ಇಲ್ಲಿಯ ತೋಂಟದಾರ್ಯ ಮಠದಲ್ಲಿರುವ ವೇದ ಮೂರ್ತಿಗಳು ಬಂದು ಪೂಜೆಯನ್ನು ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಪ್ರಾರಂಭಿಸಲಾಗುತ್ತದೆ.

ಜಮಾಲಶಾವಲಿ ಶರಣರ ಗಂಧ ಎತ್ತುಗಳ ಮೆರವಣಿಗೆಯೊಂದಿಗೆ ಸೋಮವಾರ ದರ್ಗಾಕ್ಕೆ ಬಂದು ತಲುಪಿತು.

ಫೆ. 27ರಂದು ಮುಂಜಾನೆಯಿಂದ ಸಂಜೆಯವರೆಗೆ ರೈತರ ಎತ್ತುಗಳ ಮೆರವಣಿಗೆ, ರಾತ್ರಿ ಅನ್ನಸಂತರ್ಪಣೆ ಜರುಗಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಿವಾಯಿತ ಪದ, ಮಾಳಿಂಗರಾಯ, ಕರಿಸಿದ್ದೇಶ್ವರ ಡೊಳ್ಳಿನ ಮೇಳದವರಿಂದ ಡೊಳ್ಳಿನ ಪದಗಳು, ಜಾನಪದ ಕಾರ್ಯಕ್ರಮಗಳು ಜರುಗುವವು. ಸಮಿತಿಯ ಗೌರವಾಧ್ಯಕ್ಷ ಶಪೀಕ ಮೂಲಿಮನಿ, ಅಧ್ಯಕ್ಷ ಅಲ್ಲಿಸಾಬ ಮೂಲಿಮನಿ, ಉಪಾಧ್ಯಕ್ಷ ಬುಡ್ನೆಸಾಬ ಅತ್ತಾರ, ಕಾರ್ಯದರ್ಶಿ ದಾವಲಸಾಬ ಸೊರಟೂರ, ಸಮಿತಿಯ ಸದಸ್ಯರು, ಹಿಂದು ಮುಸ್ಲಿಂ ಸಮಾಜದ ಹಿರಿಯರು ಭಕ್ತರು ಪಾಲ್ಗೊಳ್ಳುವರು.

ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಈ ಭಾಗದಲ್ಲಿ ವಿವಿಧತೆಯನ್ನು ಏಕತೆಯನ್ನು ಮೂಡಿಸಿದ್ದಾರೆ. ಹಜರತ್ ಜಮಾಲಶಾವಲಿ ಶರಣರು ಭಕ್ತರ ಪಾಲಿನ ಆಶಾಕಿರಣವಾಗಿದ್ದು, ಅವರ ಸದ್ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಭಕ್ತರಲ್ಲಿ ಜೀವನೋತ್ಸಾಹ ಮೂಡಿಸಿವೆ. ಗ್ರಾಪಂ ಸದಸ್ಯ ಹುಸೇನಸಾಬ ಮೂಲಿಮನಿ, ಗುತ್ತಿಗೆದಾರ ಅಲ್ಲಾವುದ್ದಿನ ಹೊಂಬಳ ಹೇಳುತ್ತಾರೆ.

ಉತ್ತರ ಕರ್ನಾಟಕದಲ್ಲಿಯೇ ಬಸವತತ್ವದ ಜಾಗೃತಪೀಠ ಮತ್ತು ರೊಟ್ಟಿ ಜಾತ್ರೆಗೆ ಪ್ರಸಿದ್ಧವಾದ ತೋಂಟದಾರ್ಯ ಮಠದ ಜಾತ್ರಾಮಹೋತ್ಸವ ನಂತರ ಉರೂಸ್‌ ನಡೆಯಲಿದ್ದು, ಪ್ರತಿ ವರ್ಷ ಹಜರತ ಜಮಾಲಶಾವಲಿ ಶರಣರ ಗಂಧ ಮತ್ತು ಉರೂಸ್‌ ಎಲ್ಲರೂ ಕೂಡಿಕೊಂಡು ಮಾಡುವ ಶರಣರ ಉತ್ಸವವಾಗಿದೆ ಎಂದು ಸಮಾಜ ಸೇವಕ ಜಾಕೀರ ಮೂಲಿಮನಿ ಹೇಳುತ್ತಾರೆ.