ಸಾರಾಂಶ
ನಿತ್ಯವೂ ಅಚ್ಚ ಕನ್ನಡದಲ್ಲಿಯೇ ಎರಡು ಹೊತ್ತು ಪೂಜೆ ಜರುಗುವ ಹಾಗೂ ಶತ ಶತಮಾನಗಳಿಂದ ನಂದಾದೀಪದಿಂದ ಕಂಗೊಳಿಸುತ್ತಿರುವ ಪಟ್ಟದ ಹೇಮಗಿರಿ ಚನ್ನಬಸವೇಶ್ವರ ಮಠದ ಮಹಾ ಕಾರ್ತಿಕೋತ್ಸವ ಸೋಮವಾರ ರಾತ್ರಿ ವೈಭವದಿಂದ ಜರುಗಲಿದೆ.
ಗುತ್ತಲ: ನಿತ್ಯವೂ ಅಚ್ಚ ಕನ್ನಡದಲ್ಲಿಯೇ ಎರಡು ಹೊತ್ತು ಪೂಜೆ ಜರುಗುವ ಹಾಗೂ ಶತ ಶತಮಾನಗಳಿಂದ ನಂದಾದೀಪದಿಂದ ಕಂಗೊಳಿಸುತ್ತಿರುವ ಪಟ್ಟದ ಹೇಮಗಿರಿ ಚನ್ನಬಸವೇಶ್ವರ ಮಠದ ಮಹಾ ಕಾರ್ತಿಕೋತ್ಸವ ಸೋಮವಾರ ರಾತ್ರಿ ವೈಭವದಿಂದ ಜರುಗಲಿದೆ.
10ನೇ ಶತಮಾನದ ಆದಿಯಲ್ಲಿ ಸ್ಥಾಪಿತವಾದ ಶ್ರೀಹೇಮಗಿರಿಮಠವು ನಾಡಿನ ಖ್ಯಾತ ಮಠಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಹೇಮಗಿರಿ ಚನ್ನಬಸವೇಶ್ವರ ಹಾಗೂ ಹೇಮಗಿರಿ ಅಕ್ಕನಾಗಮ್ಮ ಮಾತೆಯ ಗದ್ದುಗೆಗಳ ಮಹಾ ಕಾರ್ತಿಕೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.ಎಲ್ಲ ದೇವಸ್ಥಾನ ಹಾಗೂ ಮಠಗಳಲ್ಲಿ ಸಂಸ್ಕೃತದಲ್ಲಿ ಪೂಜೆಗಳು ಜರುಗುತ್ತಿದ್ದರೆ ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದಲ್ಲಿರುವ ಶ್ರೀಹೇಮಗಿರಿಮಠದಲ್ಲಿ ಮಾತ್ರ ನಿತ್ಯ 2 ಬಾರಿ ಕನ್ನಡದಲ್ಲಿಯೇ ಪೂಜೆಗಳು ನಡೆಯುತ್ತವೆ. ಗ್ರಹಣಗಳ ಜರುಗಿದ ಸಂದರ್ಭದಲ್ಲಿ ಗ್ರಹಣ ಮೋಕ್ಷದ ನಂತರ ಪೂಜೆಗಳನ್ನು ನಡೆಸಿಕೊಂಡು ಬರಲಾಗಿದೆ.ಶ್ರೀಮಠದಲ್ಲಿ ಇಂದಿಗೂ ಅನೇಕ ಸಂಪ್ರದಾಯ ಆಚರಣೆಗಳು ನಡೆದುಕೊಂಡು ಬರುತ್ತಿದ್ದು, ನಿತ್ಯವೂ ಬ್ರಾಹ್ಮೀ ಮಹೂರ್ತ ಹಾಗೂ ಗೋದೂಳಿ ಸಮಯದಲ್ಲಿ ನಗಾರಿಯನ್ನು ಬಾರಿಸಲಾಗುತ್ತದೆ. ಇದರಂತೆ ಪೂರ್ವಾಹ್ನ ಹಾಗೂ ರಾತ್ರಿ ಪೂಜೆ ವೇಳೆ ಸಹ ನಗಾರಿಯನ್ನು ಬಾರಿಸಲಾಗುತ್ತದೆ.ಸೂತಕವನ್ನು ಸಹ ಗಣನಿಗೆ ತೆಗೆದುಕೊಳ್ಳದೇ ನಿತ್ಯವೂ ಪೂಜೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸದೇ ಮಾಡುತ್ತಿರುವುದು ಮಠದ ಪುರಾತನ ಪರಂಪರೆಗೆ ಸಾಕ್ಷಿಯಾಗಿದೆ.ಸೋಮವಾರ ಎಳ್ಳು ಅಮವಾಸ್ಯೆಯಂದು ಮಹಾ ಕಾರ್ತಿಕೋತ್ಸವವು ರಾತ್ರಿ ಜರುಗುಲಿದ್ದು, ಇದಕ್ಕಾಗಿ ಪಟ್ಟಣ ಸಿದ್ಧಗೊಳ್ಳುತ್ತಿದೆ. ಪಟ್ಟಣದ ಬಹುತೇಕ ಎಲ್ಲ ಮನೆಗಳ ಮುಂಭಾಗದಲ್ಲಿ ಭಕ್ತಿಯ ಹಣತೆಗಳು ಬೆಳೆಗುತ್ತವೆ. ಬಸ್ ನಿಲ್ದಾಣ ಹತ್ತಿರದ ಮಠದ ದ್ವಾರಬಾಗಿಲಿನಿಂದ ಮಠದವರೆಗೂ, ಎರಡು ಬದಿಯ ಇಕ್ಕೆಲಗಳಲ್ಲಿ ಸಾಲು ದೀಪಗಳನ್ನು ಈಗಾಗಲೇ ನಿಲ್ಲಿಸಲಾಗುತ್ತಿದೆ.
ಮಹಾ ಕಾರ್ತಿಕೋತ್ಸವದ ನಿಮಿತ್ತ ಸೋಮವಾರ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಅನ್ನ ಸಂತರ್ಪಣೆ ನೆರವೇರುವ ಕಾರಣ ಈಗಾಗಲೇ ಅಡುಗೆಗೆ ಭರದಿಂದ ಸಿದ್ದತೆ ನಡೆದಿದೆ.