ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜು.14ರಂದು ನಗರದ ಗಾಂಧಿ ಭವನದಲ್ಲಿ ಮಾಧ್ಯಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣು ಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಬೆಳಗ್ಗೆ 10:30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ದಿಕ್ಸೂಚಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎಚ್. ವೇಣುಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ವಿ. ಶಿವಾನಂದ ತಗಡೂರು ಆಶಯ ನುಡಿಗಳನ್ನಾಡಲಿದ್ದಾರೆ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಬಿ. ಮದನ ಗೌಡರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಾಸನ ವಾಣಿ ಪತ್ರಿಕೆ ಸಂಪಾದಕರಾದ ಲೀಲಾವತಿ ಹಾಗೂ ಹಿರಿಯ ಪತ್ರಕರ್ತರಾದ ಆರ್. ಪಿ. ವೆಂಕಟೇಶಮೂರ್ತಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಸನ್ಮಾನಿತರನ್ನು ಗೌರವಿಸಲಿದ್ದು, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ, ಮಾಜಿ ಶಾಸಕ ಪ್ರೀತಂಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಎ.ಗೋಪಾಲಸ್ವಾಮಿ, ವಾರ್ತಾ ಇಲಾಖೆ ಹಿರಿಯ ನಿರ್ದೇಶಕಿ ಮೀನಾಕ್ಷಮ್ಮ, ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತರಾದ ರವಿ ನಾಕಲಗೋಡು ಸೇರಿ ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 3 ಗಂಟೆಗೆ ಸಮರೋಪ ಸಮಾರಂಭ ನಡೆಯಲಿದ್ದು ಸಾವಿರ ಶಾಯರಿಗಳ ಸರದಾರ ಹಾಗೂ ಖ್ಯಾತ ಸಾಹಿತಿ ಎಫ್. ಅಸಾದುಲ್ಲಾ ಬೇಗ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮಾಜಿ ಸಚಿವ ಎ.ಮಂಜು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ವಿ ಶಿವಾನಂದ ತಗಡೂರು ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಬಹುಮಾನ ವಿತರಣೆ ಮಾಡಲಿದ್ದಾರೆ.
ಶಾಸಕರಾದ ಎಚ್.ಡಿ. ರೇವಣ್ಣ, ಸಿಮೆಂಟ್ ಮಂಜು, ಎಚ್. ಕೆ. ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .ಹಿರಿಯ ಪತ್ರಕರ್ತರಾದ ಮಂಜುನಾಥ್ ದತ್ತ, ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಸೋಮನಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್, ನಗರಸಭೆ ಆಯುಕ್ತ ಯೋಗಾನಂದ, ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ .ಬರಹಗಾರರು ಹಾಗೂ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿರುವ ಡಾ.ಎಚ್. ಸಿ ಭವ್ಯ ನವೀನ್, ಉದ್ಯಮಿ ಎಚ್. ಎ. ಕಿರಣ್ ಹಾಗೂ ಡಾ. ಮನು ಪ್ರಕಾಶ್ ಅವರಿಗೆ ವಿಶೇಷ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು .
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಕುಟುಂಬ ವರ್ಗ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.