ಇಂದು ಪಶುವೈದ್ಯಕೀಯ ವಿವಿಯಲ್ಲಿ 13ನೇ ಘಟಿಕೋತ್ಸವ
KannadaprabhaNewsNetwork | Published : Oct 16 2023, 01:46 AM IST
ಇಂದು ಪಶುವೈದ್ಯಕೀಯ ವಿವಿಯಲ್ಲಿ 13ನೇ ಘಟಿಕೋತ್ಸವ
ಸಾರಾಂಶ
445 ಸ್ನಾತಕ , 333 ಸ್ನಾತಕೋತ್ತರ, 59 ಡಾಕ್ಟರೇಟ್ ಪದವಿ ಪ್ರದಾನ, ಗದಗ ಕಾಲೇಜಿನ ರಾಘವೇಶಗೆ 16 ಚಿನ್ನದ ಪದಕ ಪ್ರದಾನ, ರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮ, ಪಶು ವೈದ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಸಿ ವೀರಣ್ಣ ಮಾಹಿತಿ
445 ಸ್ನಾತಕ , 333 ಸ್ನಾತಕೋತ್ತರ, 59 ಡಾಕ್ಟರೇಟ್ ಪದವಿ ಪ್ರದಾನ । ಗದಗ ಕಾಲೇಜಿನ ರಾಘವೇಶಗೆ 16 ಚಿನ್ನದ ಪದಕ ಪ್ರದಾನ । ರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮ । ಪಶು ವೈದ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಸಿ ವೀರಣ್ಣ ಮಾಹಿತಿ ಕನ್ನಡಪ್ರಭ ವಾರ್ತೆ ಬೀದರ್ ಇಲ್ಲಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಕಾರ್ಯಕ್ರಮ ಸೋಮವಾರ ನಡೆಯಲಿದೆ. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸುಮಾರು 837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ ವೀರಣ್ಣ ತಿಳಿಸಿದರು. ಪಶು ವಿವಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಕೃಷಿ ಶಿಕ್ಷಣ) ನವದೆಹಲಿಯ ಉಪ ಮಹಾನಿರ್ದೇಶಕ ಡಾ. ಆರ್.ಸಿ ಅಗ್ರವಾಲ್ ಹಾಗೂ ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಕೆ. ವೆಂಕಟೇಶ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ತಿಳಿಸಿದರು. ಸಮಾರಂಭದಲ್ಲಿ ವಿವಿಧ ವಿಭಾಗಗಳ 445 ಸ್ನಾತಕ ಪದವೀಧರರು, 333 ಸ್ನಾತಕೋತ್ತರ ಹಾಗೂ 59 ಡಾಕ್ಟರೇಟ್ ಪಡೆದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ವಿವಿಧ ಕಾರಣಗಳಿಂದ ಸೋಮವಾರ ನಡೆಯಲಿರುವ ಸಮಾರಂಭದಲ್ಲಿ 262 ಪದವೀಧರರು ಹಾಜರಾಗಿ ಪದವಿ ಸ್ವೀಕರಿಸಲಿದ್ದಾರೆ. ಇದಲ್ಲದೇ 2020-21 ಮತ್ತು 2021-22ನೇ ಸಾಲಿನ ಒಟ್ಟು 70 ಪ್ರತಿಭಾನ್ವಿತ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವೀಧರರಿಗೆ ಚಿನ್ನದ ಪದಕಗಳನ್ನು ನೀಡಿ ರಾಜ್ಯಪಾಲರು ಗೌರವಿಸಲಿದ್ದಾರೆ. ಅದರಲ್ಲಿ 61 ವಿಶ್ವವಿದ್ಯಾಲಯದ ಪದಕಗಳು ಮತ್ತು 67 ಪ್ರಾಯೋಜಿತ ಚಿನ್ನದ ಪದಕಗಳಿವೆ ಎಂದರು. 2021-22 ಸಾಲಿನ ಸ್ನಾತಕ ಪದವಿ ವಿಭಾಗದಲ್ಲಿ: ಬಿವಿಎಸ್‌ಸಿ ಮತ್ತು ಎಎಚ್ ವಿಭಾಗದ ರಾಘವೇಶ, ಎಎನ್ ಪಶುವೈದ್ಯಕೀಯ ಮಹಾವಿದ್ಯಾಲಯ ಗದಗ ಇವರು ಒಟ್ಟು 16 ಚಿನ್ನದ ಪದಕ ಸ್ವೀಕರಿಸಿ ಪ್ರಥಮ ಇರಲಿದ್ದಾರೆ. ಬೀದರ್ ಪಶುವೈದ್ಯಕೀಯ ವಿವಿಯ ಸಚಿನ್ ಹುದ್ದಾರ್ 5, ಬೆಂಗಳೂರು ಕಾಲೇಜಿನ ವಸುಧಾ ಎ.ಎನ್ 4, ಶಿವಮೊಗ್ಗ ಕಾಲೇಜಿನ ನೈದಿಲೆ ಕೆ.ಆರ್. 3, ಶಿವಮೊಗ್ಗದ ಮಮತಾ ಬಿ.ಎಸ್. 2, ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಸದುಮ್ ಕವಿತಾ 1, ಗದಗ ಕಾಲೇಜಿನ ದಾನೇಶ್ವರಿ ಇತ್ನಾಳ್ 1 ಮತ್ತು ಅದೇ ಕಾಲೇಜಿನ ನಂದನಾ ಜಿ.ಎಸ್ 1 ಚಿನ್ನದ ಪದಕ ಪಡೆಯಲಿದ್ದಾರೆ. ಬಿಟೆಕ್ (ಹೈನು ತಂತ್ರಜ್ಞಾನ) ವಿಭಾಗದದಲ್ಲಿ ಬೆಂಗಳೂರು ಕಾಲೇಜಿನ ಸುರೇಶ ಬಾಬು, ಸಿಎಸ್ 4, ಸೌಂದರ್ಯ ಕೃಷ್ಣ, ಡಿಎಸ್ 1 ಮತ್ತು ಕಲಬುರಗಿಯ ಹೈನು ವಿಜ್ಞಾನ ಮಹಾವಿದ್ಯಾಲಯದ ಹರ್ಷಿತಾ ಪಿ.ಆರ್. 1 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿಎಫ್‌ಎಸ್ಸಿಯಲ್ಲಿ ಮಂಗಳೂರು ಕಾಲೇಜಿನ ಹೇಮಶ್ರೀ ಗೌಡ 3 ಚಿನ್ನದ ಪದಕ ಪಡೆಯಲಿದ್ದಾರೆ. 2020-21 ಹಾಗೂ 2021-22 ಸಾಲಿನಲ್ಲಿ ಡಾಕ್ಟರೇಟ್ ಪಡೆದವರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಶಿವಶಂಕರ್ ಎಸ್, ಸಂಶೋಧನಾ ನಿರ್ದೇಶಕ ಡಾ. ಬಿ.ವಿ ಶಿವಪ್ರಕಾಶ, ವಿಸ್ತರ್ಣಾ ನಿರ್ದೇಶಕ ಡಾ. ಎನ್‌ಎ ಪಾಟೀಲ್, ಹಾಗೂ ವಿಶ್ವವಿದ್ಯಾಲಯದ ಇನ್ನಿತರ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.