ಇಂದು ಆರ್‌ಡಿಪಿಆರ್ ವಿಶ್ವವಿದ್ಯಾಲಯದ ೪ನೇ ಘಟಿಕೋತ್ಸವ

| Published : Mar 06 2024, 02:19 AM IST

ಇಂದು ಆರ್‌ಡಿಪಿಆರ್ ವಿಶ್ವವಿದ್ಯಾಲಯದ ೪ನೇ ಘಟಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ವಿಶ್ವ ವಿದ್ಯಾಲಯದ ೪ನೇ ಘಟಿಕೋತ್ಸವವನ್ನು ಮಾ. ೬ರಂದು ಬೆಳಗ್ಗೆ ೧೧.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ವಿಷ್ಣುಕಾಂತ ಚಟಪಲ್ಲಿ ಹೇಳಿದರು.

ಗದಗ: ನಗರದ ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ವಿಶ್ವ ವಿದ್ಯಾಲಯದ ೪ನೇ ಘಟಿಕೋತ್ಸವವನ್ನು ಮಾ. ೬ರಂದು ಬೆಳಗ್ಗೆ ೧೧.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ವಿಷ್ಣುಕಾಂತ ಚಟಪಲ್ಲಿ ಹೇಳಿದರು.

ಸಮೀಪದ ನಾಗಾವಿಯ ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿಯೇ ನಮ್ಮ ಸಂಕಲ್ಪ ಘೋಷವಾಕ್ಯದಡಿ ಜರುಗುವ ೪ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್‌, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರ ಸರಕಾರದ ಪಂಚಾಯತ್ ರಾಜ್ ಮಂತ್ರಾಲಯದ ಮಾಜಿ ಜಂಟಿ ಕಾರ್ಯದರ್ಶಿ ಡಾ. ಟಿ.ಆರ್.ರಘುನಂದನ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.

೪ನೇ ಘಟಿಕೋತ್ಸವದಲ್ಲಿ ೧೦ ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳ ೨೩೯ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ ೫ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪದವಿಗಳನ್ನು ಪ್ರದಾನ ಮಾಡಲಾಗುವುದು. ಅದರಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ೧೧ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಎರಡು ಮತ್ತು ಮೂರನೇ ರ್‍ಯಾಂಕ್‌ ಗಳಿಸಿದ ೧೦ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದರು.

ಪಂಜಾಬ್ ಪ್ರಾಂತದಿಂದ ಕರ್ನಾಟಕಕ್ಕೆ ಆಗಮಿಸಿ ಕನ್ನಡ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅಚ್ಚ ಕನ್ನಡಿಗರಾಗಿ ಸಾರ್ಥಕ ಜೀವನ ನಡೆಸಿಕೊಂಡು ಬಂದಿರುವ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಗೌರವ ಪದವಿ ಹಾಗೂ ಸಹಕಾರ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರದ ವಿಕೇಂದ್ರೀಕರಣಗೊಳಿಸುವ ಹಾಗೂ ನೀತಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯದ ೫ನೇ ಹಣಕಾಸು ಅಯೋಗದ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ನಾರಾಯಣಸ್ವಾಮಿ ಅವರಿಗೆ ಡಾಕ್ಟರ್ ಆಫ್ ಲಾಸ್ (ಎಲ್.ಎಲ್.ಡಿ) ಗೌರವ ಪದವಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ. ಸುರೇಶ ನಾಡಗೌಡರ, ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.