ಇಂದು ರಾಘವೇಶ್ವರ ಶ್ರೀಗಳ 50ನೇ ವರ್ಧಂತಿ: 50 ಸಾವಿರ ಸಸಿ ನೆಡುವ ಕಾರ್ಯಕ್ರಮ

| Published : Jul 13 2025, 01:18 AM IST

ಇಂದು ರಾಘವೇಶ್ವರ ಶ್ರೀಗಳ 50ನೇ ವರ್ಧಂತಿ: 50 ಸಾವಿರ ಸಸಿ ನೆಡುವ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಮಠದ ಮಾತೆಯರು 10 ಸಾವಿರ ಕುಂಕುಮಾರ್ಚನೆ ನಡೆಸಿ ಸೇವಾ ಕಾಣಿಕೆಯಾಗಿ ₹50 ಲಕ್ಷದ ನಿಧಿಯನ್ನು ಶ್ರೀಸಂಸ್ಥಾನಕ್ಕೆ ಸಮರ್ಪಿಸಲಿದ್ದಾರೆ.

ಗೋಕರ್ಣ: ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯದ ನಾಲ್ಕನೇ ದಿನವಾದ ಜುಲೈ 13ರಂದು ಪರಮಪೂಜ್ಯರ 50ನೇ ವರ್ಧಂತ್ಯುತ್ಸವವನ್ನು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಶಿಷ್ಯ ಸಮುದಾಯ ವೈವಿಧ್ಯಮಯವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ.

ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಶ್ರೀಮಠದ ಮಾತೆಯರು 10 ಸಾವಿರ ಕುಂಕುಮಾರ್ಚನೆ ನಡೆಸಿ ಸೇವಾ ಕಾಣಿಕೆಯಾಗಿ ₹50 ಲಕ್ಷದ ನಿಧಿಯನ್ನು ಶ್ರೀಸಂಸ್ಥಾನಕ್ಕೆ ಸಮರ್ಪಿಸಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಾತೆಯರು ಶ್ರೀಸಾನ್ನಿಧ್ಯದಲ್ಲಿ ಕುಂಕುಮಾರ್ಚನೆ ನೆರವೇರಿಸಲಿದ್ದು, ಉಳಿದಂತೆ ಶ್ರೀಮಠದ ಅಂಗಸಂಸ್ಥೆಗಳಲ್ಲಿ, ಶಾಖಾ ಮಠಗಳಲ್ಲಿ, ರಾಜ್ಯಾದ್ಯಂತ ಮಂದಿರ- ದೇಗುಲಗಳಲ್ಲಿ ಕುಂಕುಮಾರ್ಚನೆ ನಡೆಸಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತೃತ್ವಮ್ ವತಿಯಿಂದ ಶ್ರೀಮಠದ ವ್ಯಾಪ್ತಿಯ ಎಲ್ಲ ಗೋಶಾಲೆಗಳಿಗೆ, ಅಂಗಸಂಸ್ಥೆಗಳಲ್ಲಿ ಮತ್ತು ಶಾಖಾ ಮಠಗಳಲ್ಲಿರುವ ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ 50 ನೇ ವರ್ಧಂತ್ಯುತ್ಸವದ ನೆನಪಿಗಾಗಿ 50 ಸಾವಿರ ಸಸಿ ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ಪ್ರತಿಕೂಲ ಹವಾಮಾನದ ನಡುವೆಯೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕಾಸರಗೋಡು, ಶಿವಮೊಗ್ಗ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಮಾತೆಯರು ಹಾಗೂ ದೊಡ್ಡಸಂಖ್ಯೆಯಲ್ಲಿ ಶಿಷ್ಯಭಕ್ತರು ಈ ವಿಶೇಷ ಕಾರ್ಯಕ್ರಮಕ್ಕಾಗಿ ಅಶೋಕೆಗೆ ಆಗಮಿಸುತ್ತಿದ್ದಾರೆ.

ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು ಮಾತನಾಡಿ, ಹವ್ಯಕ ಮಹಾಮಂಡಲ ವ್ಯಾಪ್ತಿಯ ಎಲ್ಲ ಶಿಷ್ಯರು ಇದೇ ಸಂದರ್ಭದಲ್ಲಿ ಮಹಾರುದ್ರ ಪಠಣ ಹಮ್ಮಿಕೊಂಡಿದ್ದು, 500ಕ್ಕೂ ಹೆಚ್ಚು ಮಂದಿ ರುದ್ರ ಪಠಣ ಕೈಗೊಳ್ಳಲಿದ್ದಾರೆ ಎಂದರು.

ವೈದಿಕ ಪ್ರಧಾನ ವಿನಾಯಕ ಭಟ್ ಮಾತನಾಡಿ, ಶ್ರೀಮಠದ ವೈದಿಕ ವಿಭಾಗದಿಂದ ಶ್ರೀಗಳ ವರ್ಧಂತಿ ಅಂಗವಾಗಿ ಅರುಣ ಹವನ, ಅರುಣ ನಮಸ್ಕಾರ, ವೇದ ನಿಧಿ ಸಮರ್ಪಣೆಯಂಥ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ವಿಭಾಗ ಪ್ರಮುಖರಾದ ಅರ್ಚನಾ ಕುರುವೇರಿ, ಚಂದನ್ ಶಾಸ್ತ್ರಿ ಮತ್ತಿತರರಿದ್ದರು.