ಸಾರಾಂಶ
ಹರಿಹರ ತಾಲೂಕು ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಜಾತ್ರೆಯು ಮಾ.೧೦ರಿಂದ ಆರಂಭವಾಗಲಿದ್ದು, ಮೊದಲಿಗೆ ಬೆಳಿಗ್ಗೆ ೯ ಗಂಟೆಗೆ ಗುರು ಕರಿಬಸವೇಶ್ವರ ಗದ್ದಿಗೆಯ ಪೂಜೆ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಭಕ್ತರನ್ನು ಕಾಪಾಡುವ ಆರಾಧ್ಯದೈವ ಅಜ್ಜಯ್ಯನ ಜಾತ್ರೆ ಬಂದಿದ್ದು, ನೆರೆ ರಾಜ್ಯದ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ನಂಬಿಕೆಯಿಂದ , ಸ್ವಯಂ ಆಸಕ್ತಿಯಿಂದ ಹರಕೆ ತೀರಿಸಲು ಉಕ್ಕಡಗಾತ್ರಿ ಕ್ಷೇತ್ರಕ್ಕೆ ತಂಡೋಪವಾಗಿ ಆಗಮಿಸಲಿದ್ದು, ಬಣ್ಣದ ದೀಪಾಲಂಕಾರ ಗಳಿಂದ ಇಡೀ ಗ್ರಾಮ ಸಿದ್ಧಗೊಂಡಿದೆ.ಸಮೀಪದ ಹರಿಹರ ತಾಲೂಕು ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಜಾತ್ರೆಯು ಮಾ.೧೦ರಿಂದ ಆರಂಭವಾಗಲಿದ್ದು, ಬೆಳಿಗ್ಗೆ ೯ ಗಂಟೆಗೆ ಗುರು ಕರಿಬಸವೇಶ್ವರ ಗದ್ದಿಗೆಯ ಪೂಜೆ, ನಂತರ ನಂದಿಗುಡಿ ಮಠಧ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡುವರು. ರಾತ್ರಿ ಕೀರ್ತನೆ, ಶಿವಭಜನೆ, ಜಾಗರಣ ನಡೆಯುವುದು, ಮಾ.೧೧ಕ್ಕೆ ಕರಿಬಸವೇಶ್ವರನ ಮಹಾ ರಥೋತ್ಸವ, ೧೨ಕ್ಕೆ ಜವಳ, ಹರಕೆ, ಧಾನ್ಯಗಳೊಂದಿಗೆ ತುಲಾಭಾರ, ೧೩ ಮತ್ತು ೧೪ಕ್ಕೆ ಕಾಣಿಕೆ ಒಪ್ಪಿಸುವುದು, ಬಹಿರಂಗ ಕುಸ್ತಿಗಳು, ೧೫ಕ್ಕೆ ಪೂಜೆ ನಂತರ ಫಳಾರ ಹಾಕಿಸುವುದು, ಸ್ವಾಮಿಗೆ ರಾಜೋಪಚಾರ ಪೂಜೆ, ೧೬ಕ್ಕೆ ಸ್ವಾಮಿಯ ಬೆಳ್ಳಿ ರಥೋತ್ಸವ, ರಾತ್ರಿ ಪಾಲಿಕೋತ್ಸವ. ೧೭ಕ್ಕೆ ಅಂತಿಮ ದಿನ ಭಕ್ತರಿಗೆ ಫಳಾರ ಹಂಚುವ ಕಾರ್ಯಕ್ರಮ ಇದೆ.
ಕರಿಬಸವೇಶ್ವರನ ವಿದ್ಯಾ ಸಂಸ್ಥೆಯಡಿ ಬಡ ಮಕ್ಕಳಿಗೆ ಶಿಕ್ಷಣ. ಲಕ್ಷಾಂತರ ಭಕ್ತರಿಗೆ ಸ್ನಾನಘಟ್ಟ, ೨೮೦೦೦ ಅಡಿ ವಿಸ್ತೀರ್ಣದ ಸಾಮೂಹಿಕ ವಸತಿ ಸೌಕರ್ಯ ಕಲ್ಪಿಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದೆ, ಸುಸಜ್ಜಿತ ಶೌಚಾಲಯ, ವಸತಿ ವ್ಯವಸ್ಥೆ ಒದಗಿಸಿದೆ. ವಸತಿಗೆ ೮೦೦ ಕ್ಕೂ ಹೆಚ್ಚು ಕೊಠಡಿಯನ್ನು ನಿರ್ಮಿಸ ಲಾಗಿದೆ. ಭಕ್ತರಿಗೆ ಅನಾಹುತ ತಪ್ಪಿಸಲು ತುಂಗಭದ್ರಾ ನದಿಗೆ ತಡೆ ಗೇಟ್ ಮಾಡಿದೆ, ೬೦ ಯುವಕರ ಪಡೆ ಸ್ವಚ್ಚತಾ ಕಾರ್ಯ ಮಾಡುತ್ತಿದೆ, ಹಲವು ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮತ್ತು ಶುಧ್ದ ನೀರು ನೀಡುತ್ತಿದೆ, ಬೆಳ್ಳಿ ರಥವನ್ನು ನಿರ್ಮಿಸಲಾಗಿದೆ, ಭಕ್ತರ ನೆರವಿನಿಂದ ಚಿನ್ನದ ಕಿರೀಟವನ್ನು ಅಜ್ಜಯ್ಯನಿಗೆ ಧಾರಣೆ ಮಾಡಲಾ ಗಿದೆ. ವಾಹನ ನಿಲ್ಲಿಸುವ ಸ್ಥಳಕ್ಕೆ ನಿವೇಶನ ಕಾಯ್ದಿರಿಸಿದೆ. ಸಾರಿಗೆ ಸೌಲಭ್ಯಕ್ಕೆ ಸಾರಿಗೆ ಇಲಾಖೆಗೆ, ಅಗ್ನಿ ಶಾಮಕ ದಳದವರಿಗೂ , ಬಂದೋಬಸ್ತ್‌ಗಾಗಿ ಪೋಲೀಸ್ ಠಾಣೆಗೆ ಪತ್ರ ಬರೆಯಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್ ಪತ್ರಿಕೆಗೆ ತಿಳಿಸಿದರು.