ಉತ್ತರ ಕರ್ನಾಟಕದ ಸುಪ್ರಸಿದ್ಧ ಬಾದಾಮಿಯ ಬನಶಂಕರಿದೇವಿ ಮಹಾರಥೋತ್ಸವ ಶನಿವಾರ ಸಂಜೆ 5 ಗಂಟೆಗೆ ಜರುಗಲಿದೆ. ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳು ಡಿ.27 ರಿಂದ ಆರಂಭವಾಗಿದ್ದು, ಶನಿವಾರ ಬನದ ಹುಣ್ಣಿಮೆ ದಿನ ಸಂಜೆ 5 ಗಂಟೆಗೆ ಮಹಾರಬನಶಂಕರಿ ದೇವಿಥೋತ್ಸವ ಜರುಗಲಿದೆ. ಜ.7ರಂದು 5 ಗಂಟೆಗೆ ಕಳಸ ಇಳಿಯುವ ಕಾರ್ಯಕ್ರಮ ಜರುಗಲಿದೆ.
ಕನ್ನಡಪ್ರಭ ವಾರ್ತೆ ಬಾದಾಮಿ
ಉತ್ತರ ಕರ್ನಾಟಕದ ಸುಪ್ರಸಿದ್ಧ ಬಾದಾಮಿಯ ಬನಶಂಕರಿದೇವಿ ಮಹಾರಥೋತ್ಸವ ಶನಿವಾರ ಸಂಜೆ 5 ಗಂಟೆಗೆ ಜರುಗಲಿದೆ. ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳು ಡಿ.27 ರಿಂದ ಆರಂಭವಾಗಿದ್ದು, ಶನಿವಾರ ಬನದ ಹುಣ್ಣಿಮೆ ದಿನ ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಜ.7ರಂದು 5 ಗಂಟೆಗೆ ಕಳಸ ಇಳಿಯುವ ಕಾರ್ಯಕ್ರಮ ಜರುಗಲಿದೆ.ಮಹಾರಥೋತ್ಸವದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಡಿಸಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಎಸ್.ಪಿ. ಸಿದ್ದಾರ್ಥ ಗೋಯಲ್ ಸೇರಿದಂತೆ ಇತರರು ಆಗಮಿಸುವರು. ಬನಶಂಕರಿ ಜಾತ್ರೆಯ ರಥೋತ್ಸವ ದಿನದಂದು ಶನಿವಾರ ಸಂಜೆ 4 ಗಂಟೆಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಿಂದ ಜಗದೀಶ ಅಮಾತಿಗೌಡರ, ಮಾಗುಂಡಪ್ಪ ಕೆಂಗಾರ ಕುಟುಂಬದವರು ಹಳಿಬಂಡಿ ಮೂಲಕ ರಥದ 4 ಹಗ್ಗ ತರಲಿದ್ದಾರೆ. ಚೊಳಚಗುಡ್ಡ ಗ್ರಾಪಂನಿಂದ ಮತ್ತು ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ನಾಟಕಗಳ ಪ್ರದರ್ಶನ: ಬಿ.ಎಸ್.ಆರ್.ಕಂಪನಿ, ಕೆ.ಬಿ.ಆರ್. ಡ್ರಾಮಾ ಕಂಪನಿ, ರಾಜು ತಾಳಿಕೋಟಿ ತಂಡದ ಖಾಸ್ಗೆತೇಶ್ವರ ನಾಟ್ಯ ಸಂಘ, ಮಂಡಲಗಿರಿಯ ತೋಂಟದಾರ್ಯ, ಕಮತಗಿಯ ಹೊಳೆ ಹುಚ್ಚೇಶ್ವರ ಸೇರಿದಂತೆ ವೃತ್ತಿ ರಂಗಭೂಮಿಯ ಹುಡುಗಿ ಹಿತ್ತಲದಾಗ ಹುಡುಗ ಹಿತ್ತಲದಾಗ, ಪಕ್ಕದ ಮನಿ ಚಂದ್ರಿ ನೋಡಾಕ ನೀ ಸುಂದ್ರಿ, ನಿಂಗಿ ಗತ್ತು ಸಂಗ್ಯಾಗ ಗೊತ್ತು, ಗಂಗಿ ನೀ ಜಗ್ಗ ಬೇಡ ಲುಂಗಿ, ಮುತ್ತಿನಂತ ಅತ್ತಿಗೆ, ರಚ್ಚು ಹಿಡದೈತಿ ನಿನ್ನ ಹುಚ್ಚು, ಗಿಚ್ಚ ಗಿಲಿ ಗಿಲಿ ಗಾಯಿತ್ರಿ, ಹುಬ್ಬ ಹಾರಿಶ್ಯಾಳ ಜಾತ್ರೆಯ ಧೂಳ ಎಬಿಶ್ಯಾಳ ಸೇರಿದಂತೆ ಒಟ್ಟು ಎಂಟು ನಾಟಕಗಳು ಪ್ರದರ್ಶನ ನೀಡುತ್ತಿವೆ.ಒಂದು ತಿಂಗಳ ಕಾಲ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ. ನಿರಂತರವಾಗಿ ಒಂದು ತಿಂಗಳ ಕಾಲ ನಡೆಯುವ ಸುಪ್ರಸಿದ್ಧ ಬನಶಂಕರಿದೇವಿ ಜಾತ್ರೆಯಲ್ಲಿ ಭಕ್ತರಿಗೆ ನಾಟಕಗಳ ರಂಜನೆ ಮನಸೊರೆಗೊಳ್ಳಲಿದೆ. ಟಿವಿ ಧಾರವಾಹಿಯ ಖ್ಯಾತ ಕಲಾವಿದರು ನಾಟಕ ಪ್ರದರ್ಶನ ಮಾಡಲಿದ್ದಾರೆ. ಪ್ರತಿ ದಿನ ಮೂರು ಪ್ರದರ್ಶನಗಳು ನಡೆಯುತ್ತವೆ. ಜಾತ್ರೆಯಲ್ಲಿ ಕೋಟ್ಯಂತರ ರೂ.ವ್ಯವಹಾರ ನಡೆಯಲಿದೆ. ಚಿಕ್ಕಮಕ್ಕಳಿಗೆ ಆಟೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಕೃಷಿ ಬಳಕೆಯ ಮತ್ತು ನೂತನ ಮನೆಗೆ ಬೇಕಾಗುವ ಸಾಮಗ್ರಿಗಳು ಜಾತ್ರೆಯಲ್ಲಿ ಮಾರಾಟವಾಗುತ್ತವೆ. ಒಂದು ತಿಂಗಳಗಳ ಕಾಲ ಸುಮಾರು ಕೋಟ್ಯಂತರ ರೂ.ವಹಿವಾಟು ನಡೆಯಲಿದೆ. ರಾಜ್ಯದ ವಿವಿದೆಡೆಗಳಿಂದ ಮತ್ತು ನೆರೆಯ ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.