ಐತಿಹಾಸಿಕ 74ನೇ ವರ್ಷದ ಶ್ರೀಕೋಟೆವಿದ್ಯಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಮಾರ್ಗದರ್ಶನದಂತೆ ಡಿವೈಎಸ್ಪಿ ಬಿ.ಚಲುವರಾಜು ನೇತೃತ್ವದಲ್ಲಿ 600ಕ್ಕೂ ಹೆಚ್ಚು ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯಿಂದ ಪಥ ಸಂಚಲನ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಐತಿಹಾಸಿಕ 74ನೇ ವರ್ಷದ ಶ್ರೀಕೋಟೆವಿದ್ಯಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರ ಮಾರ್ಗದರ್ಶನದಂತೆ ಡಿವೈಎಸ್ಪಿ ಬಿ.ಚಲುವರಾಜು ನೇತೃತ್ವದಲ್ಲಿ 600ಕ್ಕೂ ಹೆಚ್ಚು ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಪಟ್ಟಣದಲ್ಲಿ ಗುರುವಾರ ಸಂಜೆ ಪಥ ಸಂಚಲನ ನಡೆಸಿದರು.ನಿಮ್ಮೊಂದಿಗೆ ನಾವಿದ್ದೇವೆಂದು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಂದೇಶ ರವಾನಿಸಲು ಪಟ್ಟಣದ ತಾಲೂಕು ಕ್ರೀಡಾಂಗಣದಿಂದ ಆರಂಭಗೊಂಡು ಬಳಿಕ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮುಕ್ತಾಯಗೊಳಿಸಲಾಯಿತು.
ಪೊಲೀಸ್ ಪಥ ಸಂಚಲನ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಮಕ್ಕಾಮಸೀದಿ ರಸ್ತೆ ಮೂಲಕ ಮಂಡ್ಯ ರಸ್ತೆಯ ಮುಸ್ಲಿಂ ಬ್ಲಾಕ್ಗಳಲ್ಲಿ ಸಂಚರಿಸಿ ಮಾಯಣ್ಣಗೌಡನಕೊಪ್ಪಲು ರಸ್ತೆ ಮೂಲಕ ಮೈಸೂರು ರಸ್ತೆಗೆ ಬಂದು ಯಾ-ಹಲ್ಲಾ ಮಸೀದಿ ಮುಂಭಾಗದಲ್ಲಿ ಸಾಗಿ ಮಂಡ್ಯ ಸರ್ಕಲ್ ಮೂಲಕ ಟಿ.ಮರಿಯಪ್ಪ ವೃತ್ತದಲ್ಲಿ ತಿರುವು ಪಡೆದು ಸೌಮ್ಯಕೇಶವಸ್ವಾಮಿ ದೇವಸ್ಥಾನದ ರಸ್ತೆ, ಕುಂಬಾರಬೀದಿ, ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ರಸ್ತೆ, ಪಡುವಲಪಟ್ಟಣ ರಸ್ತೆ ಸೇರಿದಂತೆ ಪಟ್ಟಣದಲ್ಲಿ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿತು.ಭದ್ರತೆಗೆ 600ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ:
ಶ್ರೀಕೋಟೆ ವಿದ್ಯಾಗಣೇಶೋತ್ಸವದ ಬಂದೋಬಸ್ತ್ಗಾಗಿ ಒಬ್ಬರು ಎಸ್ಪಿ, ಒಬ್ಬರು ಎಎಸ್ಪಿ, 6 ಮಂದಿ ಡಿವೈಎಸ್ಪಿ, 20 ಮಂದಿ ಸಿಪಿಐ, 40 ಮಂದಿ ಪಿಎಸ್ಐ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರು ಹಾಗೂ ಗೃಹರಕ್ಷಕದಳದ ಸಿಬ್ಬಂದಿ ಸೇರಿ ಒಟ್ಟು 600ಕ್ಕೂ ಹೆಚ್ಚು ಸಿಬ್ಬಂ, ಜೊತೆಗೆ 4 ಕೆಎಸ್ಆರ್ಪಿ ತುಕಡಿ ಮತ್ತು 6 ಡಿಎಆರ್ ವಾಹನಗಳನ್ನು ನಿಯೋಜಿಸಲಾಗಿದೆ.ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ನಡೆಸಲು ಸಾಕಷ್ಟು ರೀತಿಯಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಿರುವ ಪೊಲೀಸ್ ಇಲಾಖೆ ಮೆರವಣಿಗೆಯ ಎಲ್ಲಾ ದೃಶ್ಯಾವಳಿಗಳನ್ನು ಇಂಚಿಂಚೂ ಸೆರೆಹಿಡಿಯಲು ನಿರ್ಧರಿಸಿದೆ. ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳ 40 ಸ್ಥಳಗಳಲ್ಲಿ ತಲಾ 3ರಂತೆ ಒಟ್ಟು 130 ಸಿಸಿ ಕ್ಯಾಮೆರಾಗಳ ಜೊತೆಗೆ ಪ್ರಮುಖ ಸ್ಥಳಗಳಲ್ಲಿ 360 ಡಿಗ್ರಿಯ 20 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದಲ್ಲದೆ 2 ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ.
ಕಳೆದ ಎರಡು ವರ್ಷಗಳ ಹಿಂದೆ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ನಾಗಮಂಗಲ ಪಟ್ಟಣ ಕೋಮು ದಳ್ಳುರಿಯಲ್ಲಿ ಬೆಂದು ಹೋಗಿತ್ತು. ಈ ಬಾರಿ ಯಾವುದೇ ಸಣ್ಣ ಪುಟ್ಟ ಘಟನೆಗಳೂ ಕೂಡ ನಡೆಯದಂತೆ ಶ್ರೀ ಕೋಟೆ ವಿದ್ಯಾಗಣಪತಿ ಉತ್ಸವವನ್ನು ಅತ್ಯಂತ ಸಂಭ್ರಮದಿಂದ ನಡೆಸಿ ಯಶಸ್ವಿಗೊಳಿಸಬೇಕೆಂಬ ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅವರ ಮಾರ್ಗದರ್ಶನದಂತೆ ವಿಶೇಷ ನಿಗಾವಹಿಸಿರುವ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟು ಶಾಂತಿಯುತ ಗಣೇಶೋತ್ಸವ ನಡೆಸುವ ಸಂಕಲ್ಪ ಮಾಡಿದ್ದಾರೆ.ನಾಗಮಂಗಲ ಡಿವೈಎಸ್ಪಿ ಬಿ.ಚಲುವರಾಜು, ಶ್ರೀರಂಗಪಟ್ಟಣ ಡಿವೈಎಸ್ಪಿ ಯು.ಡಿ.ಕಷ್ಣಮೂರ್ತಿ, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಸಿಪಿಐ ಹೇಮಂತಕುಮಾರ್, ಪಿಎಸ್ಐಗಳಾದ ವೈ.ಎನ್.ರವಿಕುಮಾರ್, ರಾಜೇಂದ್ರ, ನರೇಶ್ಕುಮಾರ್, ಜಿತೇಂದ್ರ ಸೇರಿದಂತೆ ಕೆಎಸ್ಆರ್ಪಿ, ಜಿಲ್ಲಾ ಶಸಸ್ತ್ರ ಮೀಸಲು ಪಡೆ ಸೇರಿ ಒಟ್ಟು 600 ಕ್ಕೂ ಹೆಚ್ಚು ಖಾಕಿಪಡೆ ಪಥಸಂಚಲನ ನಡೆಸಿದರು.