ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ಕಡೆಯ ದಿನವಾದ ಫೆ.೧ರ ಭಾನುವಾರ ವಿಜೃಂಭಣೆಯಿಂದ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಉತ್ಸವ ಸಮಿತಿ ಸಂಚಾಲಕ ಜಗದೀಶ್ ಗೌಡ್ರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಮಧ್ಯಾಹ್ನ ೧.೩೦ಕ್ಕೆ ನಗರದ ಚನ್ನಗಿರಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಮುಂಭಾಗದಿಂದ ಆರಂಭಗೊಳ್ಳಲಿದ್ದು, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಡಾ. ರಾಜಕುಮಾರ್ ರಸ್ತೆ ಮೂಲಕ ಹಾಲಪ್ಪ ವೃತ್ತ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ರಿಲಯನ್ಸ್ ಪೆಟ್ರೋಲ್ ಬಂಕ್‌ವರೆಗೂ ಸಾಗಲಿದೆ ಎಂದರು.

ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹೆಸರಾಂತ ಕಲಾತಂಡಗಳು ಭಾಗವಹಿಸಲಿದ್ದು, ಉತ್ಸವದಲ್ಲಿ ಮತ್ತಷ್ಟು ಮೆರಗು ನೀಡಲಿವೆ. ಈಗಾಗಲೇ ಶ್ರೀಗಳ ನೇತೃತ್ವದಲ್ಲಿ ೮ ದಿನಗಳ ಕಾಲ ಅದ್ದೂರಿಯಾಗಿ ಹುಣ್ಣಿಮೆ ಮಹೋತ್ಸವ ನಡೆದಿದ್ದು, ರಾಜ್ಯದ ವಿವಿಧೆಡೆಗಳಿಂದ ಮಠಾಧೀಶರು, ಸಾಹಿತಿಗಳು, ಚಿಂತಕರು, ಹೋರಾಟಗಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ಜರುಗಿವೆ. ಸ್ಪರ್ಧಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರೆ. ಪ್ರತಿದಿನ ಸಹಸ್ರಾರು ಭಕ್ತರು ಆಗಮಿಸಿ ಕಣ್ತುಂಬಿಕೊಂಡಿದ್ದಾರೆ ಎಂದರು.

ಕಡೆಯ ದಿನ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಧು ಸದ್ಧರ್ಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಜಿ ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉತ್ಸವ ಸಮಿತಿ ನಿರ್ದೇಶಕರಾದ ಜಿ.ಎಸ್ ಶಿವಕುಮಾರ್, ಬಿ.ವಿ ಚಂದ್ರಪ್ಪ, ಟಿ.ಎನ್ ಮಲ್ಲಯ್ಯ, ರಂಗಪ್ಪ ಗೌಡ ಮತ್ತು ಜಗದೀಶ್ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.