ಇಂದು ಬುಕ್ಕಾಂಬುಧಿಯಲ್ಲಿ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಪುಣ್ಯ ಸ್ಮರಣೋತ್ಸವ

| Published : Jan 29 2024, 01:31 AM IST

ಇಂದು ಬುಕ್ಕಾಂಬುಧಿಯಲ್ಲಿ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಪುಣ್ಯ ಸ್ಮರಣೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸದ್ದುಗದ್ದಲವಿಲ್ಲದ ಸಾಧನೆಗೈದ ಸಿದ್ಧಿ ಪುರುಷ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಾಗಿದ್ದು, ಜಗವನುದ್ಧರಿಸಲು ಅವತರಿಸಿ ಬಂದ ಯುಗ ಪುರುಷರು ಇವರು. ಕಿರಿ ವಯಸ್ಸಿನಲ್ಲಿ ಹಿರಿದಾದ ಜವಾಬ್ದಾರಿ ಹೊತ್ತು ಸದ್ಧರ್ಮ ಪೀಠ ಬೆಳಗಿದ ಭಗೀರಥ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಉಜ್ಜಯಿನಿ ಲಿಂಗೈಕ್ಯ ಸಿದ್ಧಲಿಂಗ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಸಮಾರಂಭವು ಜ.29ರ ಸೋಮವಾರ ಅವರು ತಪಸ್ಸುಗೈದ ಬುಕ್ಕಾಂಬುದಿ ಕ್ಷೇತ್ರದಲ್ಲಿ ಮತ್ತು ಶ್ರೀ ಜಗದ್ಗುರು ಉಜ್ಜಯನಿ ಸದ್ಧರ್ಮ ಪೀಠದಲ್ಲಿ ವಿದ್ಯುಕ್ತವಾಗಿ ನಡೆಯಲಿದ್ದು, ಭಕ್ತವೃಂದ ಪಾಲ್ಗೊಳ್ಳಬೇಕು ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಜಗದ್ಗುರು, ಸದ್ದುಗದ್ದಲವಿಲ್ಲದ ಸಾಧನೆಗೈದ ಸಿದ್ಧಿ ಪುರುಷ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಾಗಿದ್ದು, ಜಗವನುದ್ಧರಿಸಲು ಅವತರಿಸಿ ಬಂದ ಯುಗ ಪುರುಷರು ಇವರು. ಕಿರಿ ವಯಸ್ಸಿನಲ್ಲಿ ಹಿರಿದಾದ ಜವಾಬ್ದಾರಿ ಹೊತ್ತು ಸದ್ಧರ್ಮ ಪೀಠ ಬೆಳಗಿದ ಭಗೀರಥ. ಜ್ಞಾನ ಧ್ಯಾನ ತಪಸ್ಸುಗಳ ಮೂಲಕ ಭಕ್ತ ಸಂಕುಲದ ಬಾಳಿಗೆ ಬೆಳಕು ತೋರಿದ ದಿವ್ಯ ಚೇತನ. ಜಗಳೂರು ತಾಲೂಕಿನ ಬಂಗಾರಕ್ಕನಹಳ್ಳಿ ಶ್ರೀ ಚನ್ನಬಸವಾರ್ಯ-ಗುರುಸಿದ್ಧಮಾಂಬೆಯರ ಒಡಲ ಕುಡಿಯಾಗಿ ಧರ್ಮ ಸೂರ್ಯನಾದವರು ಲಿಂ. ಸಿದ್ಧಲಿಂಗ ಜಗದ್ಗುರುಗಳು.

ವೀರಶೈವ ಧರ್ಮ ಸಂಸ್ಕೃತಿ ಪರಂಪರೆಗೆ ಮತ್ತು ಗುರು ಪೀಠಗಳ ಪುನಶ್ಚೇತನಕ್ಕೆ ಜೀವನ ಮುಡಿಪಾಗಿಟ್ಟ ಶ್ರೇಷ್ಠ ಸಾಧಕರು ಅವರು. ಶಿವಾದ್ವೈತ ಸಿದ್ಧಾಂತದ ಅರಿವು ಆದರ್ಶಗಳನ್ನು ಜನಮನಕ್ಕೆ ತಲುಪಿಸಿದ ಮಹಾನುಭಾವ. ಅಂಗ ಅವಗುಣ ತೊಲಗಿಸಿ ಲಿಂಗ ಗುಣ ಬೆಳೆದು ಬಲಗೊಳ್ಳಲು ಸದಾ ಶ್ರಮಿಸಿದ ಧರ್ಮರತ್ನ ಇವರಾಗಿದ್ದರು ಎಂದರು.

ನೊಂದವರ ಬೆಂದವರ ಬಾಳಿಗೆ ಶಿವಯೋಗ ಶಕ್ತಿ ಸಾಧನೆ ಮೂಲಕ ಬದುಕಿಗೆ ಶ್ರೇಯಸ್ಸು ತಂದಿತ್ತ ಪರಮಾಚಾರ್ಯರು ಬಡತನ ತೊಲಗಿಸಿ ಸಿರಿತನ ಬೆಳೆಸಲು ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯಗಳ ಮೂಲಕ ಜೀವ ತುಂಬಿದ ದೂರ ದೃಷ್ಠಿಯ ಚಿಂತಕರು.

ವಿಶ್ವ ಧರ್ಮದ ವಿಭು ಶ್ರೀ ಜಗದ್ಗುರು ರೇಣುಕಾಚಾರ್ಯರು ರೂಪಿಸಿದ ತತ್ವ ಸಿದ್ಧಾಂತ ಪರಿಪಾಲಿಸಿಕೊಂಡು ಬಂದ ಧರ್ಮದ ಕಣ್ಮಣಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು. ವೀರಶೈವ ಧರ್ಮ ಸಂಸ್ಕೃತಿ ಜೊತೆ ಜೊತೆಗೆ ಶೈಕ್ಷಣಿಕ ಸತ್ಕ್ರಾಂತಿಗೆ ಬೀಜ ಬಿತ್ತಿದ ಆಚಾರ್ಯವರೇಣ್ಯರು. ಸರಳತೆಗೆ ಸಾತ್ವಿಕತೆಗೆ ಹೆಸರಾಗಿ ಉಸಿರಾಗಿ ಜೀವ ತುಂಬಿದ ಪರಮ ತಪಸ್ವಿ ಲಿಂ. ಸಿದ್ಧಲಿಂಗ ಜಗದ್ಗುರುಗಳು.

ಪಂಚಾಚಾರ್ಯ ಪ್ರಭಾ ವಾರ ಪತ್ರಿಕೆ ಮೂಲಕ ನಿಜ ತತ್ವದ ಅರಿವು ಮೂಡಿಸಲು ಗುರುಸ್ಥಲದ ಹಿರಿಮೆ ಬೆಳೆಸಲು ಸದಾ ಶ್ರಮಿಸಿ ಧರ್ಮ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ ದಿವ್ಯ ಚೇತನ. ಅವರು ಅಗಲಿ ೮೮ ಸಂವತ್ಸರಗಳು ಸಂದರೂ ಅವರ ನೆನಹು ನಮ್ಮೆಲ್ಲರ ಬಾಳಿಗೆ ಸದಾ ಹಸಿರು ಹಸಿರಾಗಿದೆ. ಅಜ್ಞಾನದ ಕವಲು ದಾರಿಯಲ್ಲಿ ಮುಗ್ಗರಿಸುತ್ತಿರುವ ಜನ ಸಮುದಾಯಕ್ಕೆ ಅವರು ತೋರಿದ ದಾರಿ ಮಾಡಿದ ತಪಸ್ಸು ಸರ್ವರನ್ನು ಸನ್ಮಾರ್ಗದ ಕಡೆಗೆ ಕರೆ ತರಲೆಂದು ಸದಾ ಸ್ಮರಿಸುತ್ತೇವೆ ಎಂದು ಶ್ರೀ ಹೇಳಿದರು.

ಜಗದ್ಗುರು ಪುಣ್ಯ ಸ್ಮರಣೋತ್ಸವದ ಅಂಗವಾಗಿ ಬುಕ್ಕಾಬುಂಧಿ ಕ್ಷೇತ್ರದಲ್ಲಿ ಅವರ ಮಂಗಲ ಮೂರ್ತಿಗೆ ವಿಶೇಷ ಅಭಿಷೇಕ, ಮಹಾಪೂಜೆ ನಡೆಯಲಿದೆ. ಉಜ್ಜಯಿನಿ ಪೀಠದಲ್ಲೂ ವಿಶೇಷ ಪೂಜೆ, ಆರಾಧನೆಗಳು ನಡೆಯಲಿದೆ ಎಂದು ಜಗದ್ಗುರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.