ಇಂದು ವರ ಮಹಾಲಕ್ಷ್ಮೀ ವ್ರತ: ಹಬ್ಬಕ್ಕೆ ಬೆಲೆ ಏರಿಕೆಯ ಬರೆ

| Published : Aug 08 2025, 01:00 AM IST

ಸಾರಾಂಶ

ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರಮುಖವಾಗಿ ಬೇಕಾಗಿರುವ ಲಕ್ಷ್ಮೀ ಮುಖವಾಡ, ಬಳೆ ಖರೀದಿ ಭರಾಟೆ ಜೋರಾಗಿತ್ತು. ತಮ್ಮ ಶಕ್ತ್ಯಾನುಸಾರ ಚಿನ್ನ, ಬೆಳ್ಳಿ, ಮೆಟಲ್ ಲಕ್ಷ್ಮೀ ಮುಖವಾಡ ಖರೀದಿಸಿದರು. ಮುತ್ತೈದೆಯರಿಗೆ ನೀಡಲು ಬಳೆಗಳ ಖರೀದಿಯೂ ಜೋರಾಗಿತ್ತು. ಇದರಿಂದಾಗಿ ಬಳೆ ಅಂಗಡಿಗಳು ಮಹಿಳೆಯರಿಂದಲೇ ತುಂಬಿದ್ದವು.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನಗರದ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿತ್ತು.

ನಗರದ ದೇವರಾಜ ಮಾರುಕಟ್ಟೆಯಲ್ಲಿ ಕಾಲಿಡಲು ಸ್ಥಳವಿರದಷ್ಟು ಮಂದಿ ಜಮಾವಣೆಗೊಂಡರು. ಜಿಲ್ಲೆಯ ಮತ್ತು ನೆರೆಯ ಜಿಲ್ಲೆಯಿಂದಲೂ ಸಹಸ್ರಾರು ಮಂದಿ ಮಾರುಕಟ್ಟೆಗೆ ಭೇಟಿ ನೀಡಿದ್ದರಿಂದ ನೂಕು ನುಗ್ಗಲು ಉಂಟಾಯಿತು.

ವರ ಮಹಾಲಕ್ಷ್ಮೀ ಹಬ್ಬವು ಪ್ರಮುಖವಾಗಿ ಮಹಿಳೆಯರಿಗೆ ಸೇರಿದ್ದರಿಂದ ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಮಂದಿ ಜಮಾಯಿಸಿದರೆ, ಅದಕ್ಕಿಂತ ಹೆಚ್ಚಿನ ಮಂದಿ ಹೂ, ಹಣ್ಣು, ತರಕಾರಿ ಮುಂತಾದ ವಸ್ತುಗಳ ಖರೀದಿಗೆ ಮುಗಿ ಬಿದ್ದರು.

ಸೇವಂತಿಗೆ ಹೂವಿನ ಬೆಲೆ ಮಾರಿಗೆ 100 ರಿಂದ 150 ರೂ. ಇದ್ದರೆ, ಚಂಡು ಹೂವಿನ ಬೆಲೆಯೂ ಹೆಚ್ಚಾಗಿತ್ತು. ಬಿಡಿ ಮಲ್ಲಿಗೆ ಹೂ ಒಂದು ಕೆಜಿಗೆ 1000 ರೂ., ಕನಕಾಂಬರ ಕೆಜಿಗೆ 2200 ರೂ. ಏರಿಕೆಯಾಗಿದ್ದು, ದುಬಾರಿಯಾಗಿದೆ. ಒಂದು ಕೆಜಿ ಗುಲಾಬಿ ಹೂವಿಗೆ 400, ಮರಳೆ 1 ಸಾವಿರ, ಕಾಕಡ 1 ಸಾವಿರ, ಪನ್ನೀರ್ ಎಲೆ, ತಾವರೆ ಹೂವಿನ ಬೆಲೆಯೂ ಏರಿಕೆಯಾಗಿದೆ. ಲಕ್ಷ್ಮೀ ಹಬ್ಬಕ್ಕೆ ಹೆಚ್ಚು ಬಳಸುವ ತಾವರೆ ಹೂವು 20 ರಿಂದ 40 ರೂ ಆಗಿದೆ. ವೀಳ್ಯದೆಲೆ ಹಾಗೂ ನಿಂಬೆ ಹಣ್ಣಿನ ಬೆಲೆಯೂ ಹೆಚ್ಚಾಗಿದೆ.

ಶ್ರಾವಣಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರಿನಲ್ಲಿ ಸಿದ್ಧತೆ ಜೋರಾಗಿದ್ದು, ಬೆಲೆ ಏರಿಕೆ ನಡುವೆಯೂ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಧನ್ವಂತ್ರಿ ರಸ್ತೆ, ಜೆ.ಕೆ. ಮೈದಾನ, ನಂಜುಮಳಿಗೆ ವೃತ್ತ, ಅಗ್ರಹಾರ ಮತ್ತು ವಾಣಿವಿಲಾಸ ಮಾರುಕಟ್ಟೆಗೆ ಭೇಟಿ ನೀಡಿ ಹಬ್ಬಕ್ಕೆ ಬೇಕಾದ ಪದಾರ್ಥಗಳು, ಹೂವು ಹಣ್ಣು ಸೇರಿದಂತೆ ಪೂಜಾ ಸಾಮಾಗ್ರಿಗಳನ್ನು ಖರೀದಿಸಿದರು. ಇದರಿಂದಾಗಿ ದೇವರಾಜ ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಾರುಕಟ್ಟೆಯೊಳಗೆ ಕಾಲಿಡಲು ಆಗದಷ್ಟು ಜನದಟ್ಟಣೆ ಇತ್ತು.

ವರಮಹಾಲಕ್ಷ್ಮೀ ಹಬ್ಬವಾದ್ದರಿಂದ ಹೂವಿಗೆ ಹೆಚ್ಚು ಬೇಡಿಕೆ ಇದ್ದು, ಬೇರೆ ದಿನಗಳಿಗೆ ಹೋಲಿಸಿದರೆ ಬೆಲೆ ಹೆಚ್ಚಾಗಿತ್ತು. ಲಕ್ಷ್ಮೀಪೂಜೆಗೆ ಬಳಸುವ ಹೂವುಗಳ ಬೆಲೆ ದುಪ್ಪಟ್ಟಾಗಿದ್ದು, ಹಣ್ಣು ತರಕಾರಿಗಳ ಬೆಲೆಯಲ್ಲೂ ಏರಿಕೆಯಾಗಿದೆ. ಜವಳಿ ಮಳಿಗೆಗಳಲ್ಲಿ ಹಬ್ಬದ ದಿನದಂದು ಮುತ್ತೈದೆಯರಿಗೆ ಅರಿಶಿಣ ಕುಂಕುಮದೊಂದಿಗೆ ನೀಡುವ ರವಿಕೆ ಬಟ್ಟೆ ಕೊಳ್ಳುವುದರಲ್ಲಿ ಮಹಿಳೆಯರು ನಿರತರಾಗಿದ್ದರು.

ಇದರಿಂದ ಒಲಂಪಿಯಾ, ಪ್ರಭಾ, ಉಮಾಚಿತ್ರ ಮಂದಿರ, ಕೆ.ಟಿ.ಸ್ಟ್ರೀಟ್ ಸುತ್ತಮುತ್ತಲ ಹೋಲ್‌ ಸೇಲ್ ಅಂಗಡಿಗಳಲ್ಲಿ ಜನಜಂಗುಳಿ ಇತ್ತು. ಹೊಸದಾಗಿ ಲಕ್ಷ್ಮೀ ಇರುವ ಭಾವಚಿತ್ರ, ಮುಖವಾಡ ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ವರಮಹಾಲಕ್ಷ್ಮೀ ಹಬ್ಬಕ್ಕೆ ಪ್ರಮುಖವಾಗಿ ಬೇಕಾಗಿರುವ ಲಕ್ಷ್ಮೀ ಮುಖವಾಡ, ಬಳೆ ಖರೀದಿ ಭರಾಟೆ ಜೋರಾಗಿತ್ತು. ತಮ್ಮ ಶಕ್ತ್ಯಾನುಸಾರ ಚಿನ್ನ, ಬೆಳ್ಳಿ, ಮೆಟಲ್ ಲಕ್ಷ್ಮೀ ಮುಖವಾಡ ಖರೀದಿಸಿದರು. ಮುತ್ತೈದೆಯರಿಗೆ ನೀಡಲು ಬಳೆಗಳ ಖರೀದಿಯೂ ಜೋರಾಗಿತ್ತು. ಇದರಿಂದಾಗಿ ಬಳೆ ಅಂಗಡಿಗಳು ಮಹಿಳೆಯರಿಂದಲೇ ತುಂಬಿದ್ದವು.

ವರಮಹಾಲಕ್ಷ್ಮೀ ಹಬ್ಬಕ್ಕೆ ಹೆಚ್ಚಾಗಿ ಬಳಕೆಯಾಗುವ ವೀಳ್ಯದೆಲೆ, ಹೂವು, ನಿಂಬೆಹಣ್ಣು, ವಿವಿಧ ಹಣ್ಣುಗಳ ಬೆಲೆ ಏರಿಕೆಯಾಗಿದೆ.

ಹಣ್ಣುಗಳ ಬೆಲೆಯಲ್ಲೂ 10 ರಿಂದ 20 ರೂ. ಹೆಚ್ಚಳವಾಗಿದೆ. ದಾಳಿಂಬೆ, ಸೇಬು, ಬಾಳೆಹಣ್ಣು, ಮೋಸಂಬಿ ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು, ಪೂಜೆಯಂದು ದೇವಿಯ ಮುಂದೆ ಒಂಬತ್ತು ತಟ್ಟೆಯಲ್ಲಿ ಹಣ್ಣುಗಳನ್ನು ಇಡಬೇಕಿರುವುದರಿಂದ ಜನರು ಹಣ್ಣುಗಳ ಖರೀದಿಗೆ ಮುಗಿಬಿದ್ದರು.

ಜನರನ್ನುನಿಯಂತ್ರಿಸಲು ಪೊಲೀಸರಿಂದ ಸಾಧ್ಯವಾಗದಾಯಿತು. ಸಯ್ಯಾಜಿರಾವ್‌ ರಸ್ತೆಯಲ್ಲಂತೂ ವಾಹನ ದಟ್ಟಣೆ ವಿಪರೀತವಾಗಿತ್ತು. ಸುತ್ತಮುತ್ತಲ ಪ್ರದೇಶವಾದ ಶಿವರಾಂಪೇಟೆ, ಗಾಂಧಿಚೌಕ, ದೊಡ್ಡಗಡಿಯಾರ ವೃತ್ತ, ಅಶೋಕ ರಸ್ತೆ, ಇರ್ವಿನ್‌ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಬೈಕ್‌ ನಿಲ್ಲಿಸಲು ಸ್ಥಳವಿರದಷ್ಟು ಪಾರ್ಕಿಂಗ್‌ ಸಮಸ್ಯೆ ಉಂಟಾಯಿತು.