ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಪ್ರಸ್ತುತ ಅತ್ಯಾಧುನಿಕ ಯುಗದಲ್ಲಿ ಜನರ ಮನಸ್ಥಿತಿಗೆ ತಕ್ಕಂತೆ ಪತ್ರಿಕೋದ್ಯಮವು ತನ್ನ ಕಾರ್ಯಶೈಲಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಶ್ರೀವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಈ ಡಿಜಿಟಲ್ ಜಗತ್ತಿನಲ್ಲಿ ಪತ್ರಿಕೋದ್ಯಮವು ಸಹ ಡಿಜಿಟಲೀಕರಣಗೊಂಡಿದೆ. ಮೊಬೈಲ್‌ನಲ್ಲಿಯೇ ಎಲ್ಲಾ ಕ್ಷಣ ಕ್ಷಣದ ಸುದ್ದಿಗಳನ್ನು ನಾವು ನೋಡಬಹುದಾಗಿದೆ. ಪತ್ರಿಕೆ ಓದುಗರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಜನರ ಮನಸ್ಥಿತಿ ಅರಿತು ಪತ್ರಿಕಾರಂಗವು ಸಹ ತನ್ನ ಕಾರ್ಯ ಶೈಲಿಯನ್ನು ಬದಲಿಸಿಕೊಳ್ಳಬೇಕು. ಸೋಷಿಯಲ್ ಮೀಡಿಯಾವನ್ನು ಸರಿಯಾಗಿ ಬಳಸಬೇಕು ಡಿಜಿಟಲ್ ಮೀಡಿಯಾದ ಬೆಳವಣಿಗೆಯಿಂದಾಗಿ ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನರಿತು ಡಿಜಿಟಲ್ ಯುಗದ ಸವಾಲುಗಳನ್ನು ಎದುರಿಸಿ ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮಾತನಾಡಿದರು. ಪತ್ರಕರ್ತ ಬಿ.ಎಂ. ಹನೀಪ್ ಅವರು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಇಬ್ಬರು ಹಿರಿಯ ಪತ್ರಕರ್ತರಿಗೆ ಜೀವಮಾನ ಸಾಧನೆ ವಿಶೇಷ ಹಾಗೂ 10 ಜನ ಪತ್ರಕರ್ತರಿಗೆ ಮತ್ತು ಒಬ್ಬರು ಪತ್ರಿಕಾ ವಿತರಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದ ಸಾನಿಧ್ಯವನ್ನು ವಿಜಯ ಮಹಾಂತೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು.
ಶಾಸಕರಾದ ಬಸನಗೌಡ ದದ್ದಲ್, ಮಾನಪ್ಪ ಡಿ.ವಜ್ಜಲ್, ಎಂಎಲ್ಸಿ ಎ.ವಸಂತ ಕುಮಾರ್, ಶರಣಗೌಡ ಪಾಟೀಲ ಬಯ್ಯಾಪುರ, ಡಿಸಿ ನಿತೀಶ ಕೆ, ಎಸ್ಪಿ ಪುಟ್ಟಮಾದಯ್ಯ, ಸಿಇಒ ಈಶ್ವರ ಕಾಂದೂ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾಧ್ಯಕ್ಷ ಆರ್.ಗುರುನಾಥ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ, ಲಿಂಗಸೂಗುರು ಘಟಕದ ಅಧ್ಯಕ್ಷ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ ಸೇರಿ ಸಂಘದ ಪದಾಧಿಕಾರಿಗಳು, ಸದಸ್ಯರು, ಮುಖಂಡರು, ಪತ್ರಕರ್ತರು, ಛಾಯಾಗ್ರಾಹಕರು, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.